ರಾಸಾಯನಿಕ ಶಸ್ತ್ರಾಸ್ತ್ರ ಒಪ್ಪಿಸಲು ಸಿರಿಯಾ ಸಮ್ಮತಿ
ಪ್ರಮುಖ ಬೆಳವಣೆಗೆಯೊಂದರಲ್ಲಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದ ಸಿರಿಯಾ ದೇಶ ತನ್ನ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ವಿಶ್ವಸಂಸ್ಥೆಗೆ ಒಪ್ಪಿಸಲು ಸಮ್ಮತಿ ಸೂಚಿಸಿದೆ.
ನವದೆಹಲಿ: ಪ್ರಮುಖ ಬೆಳವಣೆಗೆಯೊಂದರಲ್ಲಿ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದ್ದ ಸಿರಿಯಾ ದೇಶ ತನ್ನ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ವಿಶ್ವಸಂಸ್ಥೆಗೆ ಒಪ್ಪಿಸಲು ಸಮ್ಮತಿ ಸೂಚಿಸಿದೆ.
ಅಮೆರಿಕ ಮತ್ತು ಸಿರಿಯಾ ನಡುವಿನ ಯುದ್ಧ ತಡೆಯಲು ರಷ್ಯಾ ನಡೆಸಿದ ಸಂಧಾನ ಪ್ರಕ್ರಿಯೆ ಸಫಲವಾಗಿದ್ದು, ಸಿರಿಯಾ ದೇಶ ತನ್ನ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ವಿಶ್ವಸಂಸ್ಥೆಗೆ ಒಪ್ಪಿಸಲು ಒಪ್ಪಿಗೆ ಸೂಚಿಸಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಷ್ಯಾದ ವಿದೇಶಾಂಗ ಸಚಿವ ಸರ್ಗೇ ಲ್ಯಾವ್ರೋವ್ ಅವರು, ಸಿರಿಯಾ ತನ್ನ ರಾಸಾಯನಿಕ ಅಸ್ತ್ರಗಳನ್ನು ವಿಶ್ವಸಂಸ್ಥೆಯ ನಿಯಂತ್ರಣಕ್ಕೆ ಒಪ್ಪಿಸಲು ಸಮ್ಮತಿಸಿದ್ದು, ಅವುಗಳ ನಾಶಕ್ಕೂ ಅದು ಒಪ್ಪಿಗೆ ಸೂಚಿಸಿದೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ದಂಗೆದ್ದು, ದೇಶದಲ್ಲಿ ಅಶಾಂತಿಗೆ ಕಾರಣರಾದ ದಂಗೆಕೋರರನ್ನು ಹತ್ತಿಕ್ಕಲು ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸದ್ ಅವರು ರಾಸಾಯನಿಕ ಅಸ್ತ್ರಗಳನ್ನು ಬಳಸಿ ನೂರಾರು ಜನರ ಸಾವಿಗೆ ಕಾರಣರಾಗಿದ್ದಾರೆ ಎಂದು ಅಮೆರಿಕ ಆರೋಪ ಮಾಡಿತ್ತು. ಅಲ್ಲದೆ ವಿಶ್ವದ ದೊಡ್ಡಣ್ಣ ಅಮೆರಿಕ ಸಿರಿಯಾ ವಿರುದ್ಧ ಸೈನಿಕ ಕಾರ್ಯಾಚರಣೆ ಮಾಡುವುದಾಗಿ ನೇರವಾಗಿ ಘೋಷಿಸಿತ್ತು. ಇದಕ್ಕೆ ಅದರ ಮಿತ್ರ ರಾಷ್ಟ್ರಗಳು ಬಾಹ್ಯ ಬೆಂಬಲ ನೀಡಿದ್ದವು.
ಹೀಗಾಗಿ ಸಿರಿಯಾ ಮತ್ತು ಅಮೆರಿಕ ನಡುವೆ ಭುಗಿಲೆದ್ದಿದ್ದ ಗೊಂದಲಕ್ಕೆ ತೆರೆ ಎಳೆಯಲು ಮುಂದಾಗಿದ್ದ ವಿಶ್ವಸಮುದಾಯ, ಸೇನಾ ಕಾರ್ಯಾಚರಣೆ ನಡೆಸದಂತೆ ಅಮೆರಿಕವನ್ನು ಸಂತೈಸಲು ಮುಂದಾಗಿತ್ತು. ಅಲ್ಲದೆ ಸೇನಾ ಕಾರ್ಯಾಚರಣೆಯಿಂದ ಮುಂದಾಗುವ ಪರಿಣಾಮಗಳ ಕುರಿತು ಜಿ-20 ಶೃಂಗಸಭೆಯಲ್ಲಿ ಎಲ್ಲ ದೇಶಗಳು ಚರ್ಚಿಸಿದ್ದವು. ಕೊನೆಗೆ ರಷ್ಯಾ ನಡೆಸಿದ ಸಂಧಾನದ ಫಲವಾಗಿ ಇದೀಗ ಸಿರಿಯಾ ತನ್ನ ರಾಸಾಯನಿಕ ಅಸ್ತ್ರವನ್ನು ನಾಶಪಡಿಸಲು ಒಪ್ಪಿಗೆ ನೀಡಿದೆ.