ಮುಜಾಫರ್‌ನಗರ ಘರ್ಷಣೆ: ಕೇಂದ್ರ, ಯುಪಿ ಸರ್ಕಾರಕ್ಕೆ 'ಸುಪ್ರೀಂ' ನೋಟಿಸ್
ಕೋಮು ಗಲಭೆ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಮತ್ತು ಉ. ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ.
ನವದೆಹಲಿ: ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕೋಮು ಗಲಭೆ ಪ್ರಕರಣ ಸಂಬಂಧ ಕೇಂದ್ರ ಸರ್ಕಾರ ಮತ್ತು ಅಖಿಲೇಶ್ ಯಾದವ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ನೋಟಿಸ್ ಜಾರಿ ಮಾಡಿದೆ.
ಕಳೆದ ಸೋಮವಾರ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಭುಗಿಲೆದ್ದಿದ್ದ ಕೋಮು ಗಲಭೆಯಲ್ಲಿ ಈವರೆಗೂ ಸುಮಾರು 50 ಜನರು ಸಾವಿಗೀಡಾಗಿದ್ದರು. ಇದೀಗ ಕೋಮು ಗಲಭೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಗರಂ ಆಗಿರುವ ಸುಪ್ರೀಂ ಕೋರ್ಟ್ ಈ ಬಗ್ಗೆ ವಿವರಣೆ ನೀಡುವಂತೆ ನೋಟಿಸ್ ಜಾರಿಮಾಡಿದೆ. ಕೇಂದ್ರ ಸರ್ಕಾರ ಮತ್ತು ಅಖಿಲೇಶ್ ಯಾದವ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ಸೆಪ್ಟೆಂಬರ್ 16ರೊಳಗೆ ನ್ಯಾಯಾಲಯಕ್ಕೆ ಗಲಭೆ ಕುರಿತು ಉತ್ತರಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಯುವತಿಯೋರ್ವಳನ್ನು ರೇಗಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಭುಗಿಲೆದಿದ್ದ ಘರ್ಷಣೆ ಸತತ 4 ದಿನಗಳವರೆಗೂ ಮುಂದುವರೆದಿತ್ತು. ಘರ್ಷಣೆಯನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರ ಮತ್ತು ಸ್ಥಳೀಯ ಪೊಲೀಸರು ವಿಫಲವಾದ ಹಿನ್ನಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಸೇನಾಪಡೆಗಳ ಸಹಾಯ ಕೇಳಿತ್ತು. ಅಂದು ಕಣಕ್ಕಿಳಿದಿದ್ದ ಸೇನಾಪಡೆಗಳು ಪರಿಸ್ಥಿತಿ ನಿಯಂತ್ರಣಕ್ಕಾಗಿ ಮುಜಾಫರ್ ನಗರದಲ್ಲಿ ಕರ್ಫ್ಯೂ ಜಾರಿ ಮಾಡಿತ್ತು.
ಕೋಮು ಗಲಭೆ ವಿಚಾರವನ್ನು ತಮ್ಮ ರಾಜಕಾರಣಕ್ಕೆ ಬಳಸಿಕೊಂಡ ರಾಜಕಾರಣಿಗಳು ಪರಸ್ಪರ ಕೆಸರೆರಚಾಟಕ್ಕೆ ಮುಂದಾಗಿದ್ದರು. ಅಲ್ಲದೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಸಮಾಜವಾದಿ ಪಕ್ಷದಲ್ಲಿಯೇ ಬಿರುಕು ಉಂಟಾಗಿದ್ದು, ಪಕ್ಷದ ಪ್ರಮುಖ ಮುಖಂಡ ಅಜಂಖಾನ್ ಅವರು ಅವರದೇ ಪಕ್ಷದ ನಾಯಕರ ವಿರುದ್ಧ ನೇರವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಸುಪ್ರೀಂ ಕೋರ್ಟ್ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.