ರುಪಾಯಿ ಮೌಲ್ಯ ಏರಿಕೆ: ಪೆಟ್ರೋಲ್ ಬೆಲೆ ಇಳಿಕೆ ಸಾಧ್ಯತೆ
ರುಪಾಯಿ ಮೌಲ್ಯ ಏರಿಕೆ ಮತ್ತು ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನಲೆಯಲ್ಲಿ ಇತ್ತೀಚೆಗೆ ಏರಿಕೆಯಾಗಿದ್ದ ಪೆಟ್ರೋಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ.
ನವದೆಹಲಿ: ರುಪಾಯಿ ಮೌಲ್ಯ ಏರಿಕೆ ಮತ್ತು ಕಚ್ಚಾ ತೈಲ ಬೆಲೆ ಇಳಿಕೆಯಾದ ಹಿನ್ನಲೆಯಲ್ಲಿ ಇತ್ತೀಚೆಗೆ ಏರಿಕೆಯಾಗಿದ್ದ ಪೆಟ್ರೋಲ್ ದರ ಗುರುವಾರ ಇಳಿಕೆಯಾಗುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದು, ಪೆಟ್ರೋಲ್ ಬೆಲೆ ಕೂಡ ಸುಮಾರು 1.50 ರುಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಈ ಬಗ್ಗೆ ಈಗಾಗಲೇ ತೈಲ ಸಂಸ್ಥೆಗಳೊಂದಿಗೆ ಸರ್ಕಾರ ಸಭೆ ನಡೆಸಿದ್ದು, ಪೆಟ್ರೋಲ್ ಬೆಲೆಯಲ್ಲಿ 1.50 ರುಪಾಯಿ ಇಳಿಕೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನೂತನ ದರ ಇಂದು ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವ ಸಾಧ್ಯತೆ ಇದೆ. ಪೆಟ್ರೋಲ್ ದರ ಇಳಿಕೆ ನಿರ್ಧಾರದ ಹಿಂದೆ ರುಪಾಯಿ ಮೌಲ್ಯ ಏರಿಕೆ ಕೂಡ ಕಾರಣ ಎನ್ನಲಾಗುತ್ತಿದೆ. ಈ ಹಿಂದೆ ಡಾಲರ್ ಎದುರು ಅಲ್ಪ ಏರಿಕೆ ಕಂಡಿದ್ದ ರುಪಾಯಿ ಮೌಲ್ಯ 64.10 ರುಪಾಯಿಗೆ ಏರಿಕೆಯಾಗಿತ್ತು. ಇಂದು ಕೂಡ ರುಪಾಯಿ ಮೌಲ್ಯ ಏರುಗತಿಯತ್ತ ಸಾಗಿದ್ದು, ಪ್ರತಿ ಡಾಲರ್ ಬೆಲೆ 62.25ಕ್ಕೆ ಇಳಿಕೆಯಾಗಿದೆ.
ಈ ನಡುವೆ ಪೆಟ್ರೋಲ್ ದರ ಇಳಿಕೆ ಕುರಿತು ಚಿಂತನೆಯಲ್ಲಿ ತೊಡಗಿರುವ ಕೇಂದ್ರ ಸರ್ಕಾರ, ಡೀಸೆಲ್ ಮತ್ತು ಎಲ್ಪಿಜಿಯಲ್ಲಿನ ದರ ಏರಿಕೆ ಮಾಡುವ ಸಾಧ್ಯತೆ ಇದೆ.