ಮಣಿದ ಅಡ್ವಾಣಿ: ನರೇಂದ್ರ ಮೋದಿಗೆ ಪಟ್ಟ
ಆರ್ಎಸ್ಎಸ್ ಮತ್ತು ಪಕ್ಷದ ಒತ್ತಡಕ್ಕೆ ಮಣಿದಿರುವ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಮೋದಿಗೆ ಪಟ್ಟ ಕಟ್ಟಲು ಸಮ್ಮತಿ ಸೂಚಿಸಿದ್ದಾರೆ.
ನವದೆಹಲಿ: ಆರ್ಎಸ್ಎಸ್ ಮತ್ತು ರಾಜನಾಥ್ ಸಿಂಗ್ ಅವರ ಒತ್ತಡಕ್ಕೆ ಕೊನೆಗೂ ಮಣಿದಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಮೋದಿಗೆ ಪಟ್ಟ ಕಟ್ಟಲು ತಮ್ಮ ಸಮ್ಮತಿ ಸೂಚಿಸಿದ್ದಾರೆ.
ಆರ್ಎಸ್ಎಸ್ ಮತ್ತು ರಾಜನಾಥ್ ಸಿಂಗ್ ಅವರು ನಡೆಸಿದ್ದ ಸಂಧಾನ ಪ್ರಕ್ರಿಯೆ ಕೊನೆಗೂ ಯಶಸ್ವಿಯಾಗಿದ್ದು, ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಅಡ್ವಾಣಿ ಅವರು ಹಸಿರು ನಿಶಾನೆ ತೋರಿಸಿದ್ದಾರೆ. ಅಲ್ಲದೆ ಇಂದು ಸಂಜೆ ನಡೆಯಲಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಗೂ ಹಾಜರಾಗುವುದಾಗಿ ಅಡ್ವಾಣಿ ತಿಳಿಸಿದ್ದಾರೆ.
ಈ ಹಿಂದೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದ್ದ ರಾಜನಾಥ್ ಸಿಂಗ್ ಅವರು ಮೋದಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ರಾಜನಾಥ್ ಸಿಂಗ್ ಅವರ ಸಂಧಾನ ಅಲ್ಲಿಯೂ ಯಶಸ್ವಿಯಾಗಿದ್ದು, ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರ ಹೆಸರು ಸೂಚಿಸಲು ಸುಷ್ಮಾ ತಮ್ಮ ಒಪ್ಪಿಗೆ ನೀಡಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ನವದೆಹಲಿಯ ಅಶೋಕನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಸದೀಯ ಮಂಡಳಿ ಸಭೆ ಆರಂಭಗೊಳ್ಳಲಿದೆ.
ಅದಾಗಲೇ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿರುವ ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅನಂತ್ ಕುಮಾರ್ ಅವರು ಬಿಜೆಪಿ ಕಚೇರಿಗೆ ಆಗಮಿಸಿದ್ದು, ಸುಷ್ಮಾ ಸ್ವರಾಜ್ ಅವರು ಇನ್ನು ಕೆಲವೇ ಹೊತ್ತಿನಲ್ಲಿ ಕಚೇರಿ ತಲುಪಲಿದ್ದಾರೆ. ಸಭೆಗೂ ಮುನ್ನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಗುರು ಮತ್ತು ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಖುದ್ದು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ.
ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಬಿಜೆಪಿ ಸಂಸದೀಯ ಮಂಡಳಿಯ ಮತ್ತೋರ್ವ ಸದಸ್ಯ ಮುರಳಿ ಮನೋಹರ್ ಜೋಷಿ ಅವರು, ನಮ್ಮಲ್ಲಿ ಭಿನ್ನಾಭಿಪ್ರಾಯಗಳಿರಬಹುದು ಆದರೆ ಪಕ್ಷವಾಗಿ ಬಿಜೆಪಿಯಲ್ಲಿ ಒಗ್ಗಟ್ಟಿದೆ ಎಂದು ಹೇಳುವ ಮೂಲಕ ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿ ಎಂಬುದನ್ನು ಪರೋಕ್ಷವಾಗಿ ಖಚಿತ ಪಡಿಸಿದ್ದಾರೆ.