ಸ್ಪಾಟ್ ಫಿಕ್ಸಿಂಗ್: ಕ್ರಿಕೆಟ್ ಆಟಗಾರರ ಕಳ್ಳಾಟ ಸಾಬೀತು
ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ನಾಲ್ಕು ಕ್ರಿಕೆಟ್ ಆಟಗಾರರ ವಿರುದ್ಧದ ಆರೋಪಗಳು ಸಾಬೀತಾಗಿದೆ.
ಮುಂಬೈ: ಐಪಿಎಲ್‌ನಲ್ಲಿ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ನಾಲ್ಕು ಕ್ರಿಕೆಟ್ ಆಟಗಾರರ ವಿರುದ್ಧದ ಆರೋಪಗಳು ಸಾಬೀತಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಐಪಿಎಲ್-7ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ್ದ ಆರೋಪ ಹೊತ್ತಿದ್ದ ರಾಜಸ್ತಾನ ರಾಯಲ್ಸ್ ತಂಡದ ಆಟಗಾರರಾದ ಶ್ರೀಶಾಂತ್, ಅಜಿಂತ್ ಚಾಂಡೀಲಾ, ಅಂಕಿತ್ ಚೌವ್ಹಾಣ್ ಮತ್ತು ಅಮಿತ್ ಸಿಂಗ್ ಅವರ ತಪ್ಪು ಸಾಬೀತಾಗಿದೆ ಎಂದು ತಿಳಿದುಬಂದಿದೆ. ಪ್ರಕರಣ ಸಂಬಂಧ ತನಿಖೆಗಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಚಿಸಿದ್ದ ತನಿಖಾ ಸಮಿತಿಯ ತನಿಖೆ ಪೂರ್ಣಗೊಂಡಿದ್ದು, ವರದಿಯಲ್ಲಿನ ಕೆಲ ಅಂಶಗಳು ಮಾಧ್ಯಮಗಳಿಗೆ ದೊರೆತಿವೆ.
ತನಿಖಾ ಸಮಿತಿಯ ವರದಿಯನ್ವಯ ಆರೋಪಿತ ನಾಲ್ಕು ಆಟಗಾರರು ಕಳ್ಳಾಟದಲ್ಲಿ ಭಾಗಿಯಾಗಿದ್ದು ನಿಜ ಎಂಬ ಸತ್ಯ ಬಯಲಾಗಿದೆ. ಅಲ್ಲದೆ ಸ್ವತಃ ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಸ್ಥ ರವಿ ಸವಾನಿ ಅವರು ನಡೆಸಿದ್ದ ಪ್ರತ್ಯೇಕ ತನಿಖೆಯಲ್ಲಿಯೂ ಇಬ್ಬರು ಆಟಗಾರರು ತಪ್ಪೆಸಗಿರುವುದು ಸಾಬೀತಾಗಿದೆ. ಶ್ರೀಶಾಂತ್ ಮತ್ತು ಅಜಿತ್ ಚಾಂಡೀಲಾ ಮತ್ತು ಅಂಕಿತ್ ಚೌವ್ಹಾಣ್ ಅವರು ಹಣ ಪಡೆದು ಕಳ್ಳಾಟದಲ್ಲಿ ಪಾಲ್ಗೊಂಡಿದ್ದರು ಎಂದು ತನಿಖೆಯಿಂದಾಗಿ ತಿಳಿದುಬಂದಿದೆ.
ಒಟ್ಟಾರೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದ ನಾಲ್ಕು ಆಟಗಾರರ ತಪ್ಪು ಪರೋಕ್ಷವಾಗಿ ಸಾಬೀತಾಗಿದ್ದು, ತನಿಖೆ ಅಂತಿಮ ಹಂತದಲ್ಲಿರುವುದರಿಂದ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುತ್ತಿಲ್ಲ.