ಕನಕಪುರ ರಸ್ತೆಯಲ್ಲಿ ಭೀಕರ ಅಪಘಾತ: 5 ಸಾವು
ಕನಕಪುರ ರಸ್ತೆಯಲ್ಲಿ ಸ್ವಿಫ್ಟ್ ಕಾರು ಮತ್ತು ಬಿಎಂಟಿಸಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಎಲ್ಲ 5 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಬೆಂಗಳೂರು: ಬೆಂಗಳೂರಿನ ಹೊರವಲಯದ ಕನಕಪುರ ರಸ್ತೆಯಲ್ಲಿ ಸ್ವಿಫ್ಟ್ ಕಾರು ಮತ್ತು ಬಿಎಂಟಿಸಿ ಬಸ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಎಲ್ಲ 5 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಬೆಂಗಳೂರು ಹೊರವಲಯದ ಕೆಂಪಯ್ಯನ ಪಾಳ್ಯದಿಂದ ಬೆಂಗಳೂರಿನತ್ತ ಆಗಮಿಸುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಅಪಘಾತದ ರಭಸಕ್ಕೆ ಕಾರಿನ ಮೇಲೆ ಬಸ್ ಹತ್ತಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಎಲ್ಲ ಐವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಕೆಎ 03 ಎಂಎಲ್ 9825 ನಂಬರಿನ ಸ್ವಿಫ್ಟ್ ಕಾರು, ಕೆಎ 11 ಎಫ್ 1241 ನಂಬರಿನ ಬಿಎಂಟಿಸಿ ಬಸ್ ನಡುವೆ ಕನಕಪುರ ರಸ್ತೆಯ ಎಪಿಎಸ್ ಕಾಲೇಜು ಬಳಿ ಅಪಘಾತ ಸಂಭವಿಸಿದೆ. ಅಪಘಾತಕ್ಕೆ ಕಾರು ಚಾಲಕನ ಅತಿವೇಗವೇ ಕಾರಣ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ತಲಘಟ್ಟಪುರ ಪೊಲೀಸರು ದೌಡಾಯಿಸಿದ್ದು, ಕಾರಿನಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರಗೆಳೆಯಲು ಹರಸಾಹಸ ಪಡುತ್ತಿದ್ದಾರೆ. ಕ್ರೇನ್ ಮೂಲಕ ಅಪಘಾತಗೊಂಡ ಬಸ್ ಮತ್ತು ಕಾರನ್ನು ತೆರವುಗೊಳಿಸುತ್ತಿದ್ದು, ಘಟನಾ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.
ಅಪಘಾತಕ್ಕೀಡಾಗುವ ಮುನ್ನ ಸ್ವಿಫ್ಟ್ ಡಿಸೈರ್ ಕಾರು ಅತಿವೇಗವಾಗಿ ಚಲಿಸುತ್ತಿತ್ತು. ಕಾರಿನ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಪಕ್ಕದಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ನಂತರ ಹಿಂಬದಿಯಿಂದ ಬರುತ್ತಿದ್ದ ಬಿಎಂಟಿಸ್ ಬಸ್ ಕಾರಿನ ಮೇಲೆ ಹತ್ತಿದ್ದರಿಂದ ಕಾರಿನಲ್ಲಿದ್ದ ಎಲ್ಲ ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆಯ ನಂತರ ಬಿಎಂಟಿಸಿ ಬಸ್ ಚಾಲಕ ಪೊಲೀಸರಿಗೆ ಶರಣಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.