ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಯಾರಿಗೂ ಅಸಮಾಧಾನ ಇಲ್ಲ: ಸುಷ್ಮಾ

ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಿದ್ದರಿಂದ ಯಾರೂ ಅಸಾಮಾಧಾನಗೊಂಡಿಲ್ಲ ಎಂದು ಬಿಜೆಪಿ ಹಿರಿಯ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.

Srinivasa Murthy VN
Updated On : 14 Sept 2013, 3:28 am

ನವದೆಹಲಿ: ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸಿದ್ದರಿಂದ ಪಕ್ಷದಲ್ಲಿ ಯಾರೂ ಅಸಾಮಾಧಾನಗೊಂಡಿಲ್ಲ ಎಂದು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರು ಹೇಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಿಸಿದ ನಂತರ ಇಂದು ಅಡ್ವಾಣಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದ ಸುಷ್ಮಾ ಸ್ವರಾಜ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. 'ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲ ಮತ್ತು ಅಸಮಾಧಾನವಿಲ್ಲ' ಎಂದು ಹೇಳಿದರು.

ಇಂದು ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಸುಷ್ಮಾ ಸ್ವರಾಜ್ ಅವರು ಸುಮಾರು ಅರ್ಧಗಂಟೆಗಳ ಕಾಲ ಅವರೊಂದಿಗೆ ಚರ್ಚೆ ನಡೆಸಿದರು. ಸುಷ್ಮಾ ಅವರಿಗೆ ಬಿಜೆಪಿ ಹಿರಿಯ ನಾಯಕರಾದ ಅನಂತ ಕುಮಾರ್ ಅವರು ಸಾಥ್ ನೀಡಿದ್ದರು.

ಮೂಲಗಳ ಪ್ರಕಾರ ಸುಷ್ಮಾ ಭೇಟಿ ವೇಳೆ ಪ್ರಧಾನಿ ಅಭ್ಯರ್ಥಿ ಆಯ್ಕೆ ಕುರಿತು ಇಂದೂ ಕೂಡ ಅಡ್ವಾಣಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅಂತೆಯೇ ರಾಜನಾಥ್ ಸಿಂಗ್ ಅವರಿಗೆ ಅಡ್ವಾಣಿ ಬರೆದಿದ್ದ ಪತ್ರದ ಕುರಿತು ಕೂಡ ಚರ್ಚಿಸಲಾಯಿತು ಎಂದು ತಿಳಿದು ಬಂದಿದೆ. ಆದರೆ ಚರ್ಚೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸುಷ್ಮಾ ಸ್ವರಾಜ್ ಅವರು, ಪಕ್ಷದ ತೀರ್ಮಾನದ ಬಗ್ಗೆ ಯಾರು ಕೂಡ ಅಸಮಾಧಾನಗೊಂಡಿಲ್ಲ ಎಂದು ಹೇಳಿದರು. ಅಲ್ಲದೆ ಚರ್ಚೆಯಲ್ಲಿ ತಾವು ಅಡ್ವಾಣಿ ಬರೆದಿದ್ದ ಅಸಮಾಧಾನದ ಪತ್ರದ ವಿಚಾರವನ್ನು ಕೂಡ ಚರ್ಚಿಸಿಲ್ಲ ಎಂದು ಹೇಳಿದರು.

ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ನಿಟ್ಟಿನಲ್ಲಿ ನಿನ್ನೆ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಸಂಸದೀಯ ಮಂಡಳಿ ಸಭೆಯಲ್ಲಿ ಅಡ್ವಾಣಿ ಅವರು ಗೈರು ಹಾಜರಾಗಿದ್ದರು. ಅಲ್ಲದೆ ಬಿಜೆಪಿ ರಾಷ್ಟ್ರಾದ್ಯಕ್ಷ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದ ಅಡ್ವಾಣಿ, ಅದ್ಯಕ್ಷರ ವರ್ತನೆ ಮತ್ತು ಪಕ್ಷದಲ್ಲಿನ ಇತ್ತೀಚೆಗಿನ ಚಟುವಟಿಕೆಗಳು ನನಗೆ ಸರಿಕಾಣುತ್ತಿಲ್ಲ ಎಂದು ಮೋದಿ ಅವರ ಹೆಸರನ್ನು ಬಳಸದೆಯೇ ನೇರವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ನಿನ್ನೆ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಣೆ ಮಾಡಿದ ಬಳಿಕ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ ಅವರು ಸುಮಾರು ಅರ್ಧ ಗಂಟೆಗಳ ಕಾಲ ಚರ್ಚಿಸಿದ್ದರು. ಚರ್ಚೆ ಬಳಿಕವೇ ಅಡ್ವಾಣಿ ಅವರು ರಾಜನಾಥ್ ಸಿಂಗ್ ಅವರಿಗೆ ಬರೆದಿದ್ದ ಪತ್ರ ವಿಚಾರ ಮಾಧ್ಯಮಗಳಲ್ಲಿ ಬಹಿರಂಗಗೊಂಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement