ಯುವತಿ ಬಾಯಿಗೆ ಆಸಿಡ್ ಹಾಕಿ, ನೇಣು ಬಿಗಿದ ಸಹೋದರರು
ತಮಿಳುನಾಡಿನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ದಾಖಲಾಗಿದ್ದು, ಯುವತಿಯ ಸೋದರರೇ ಬಾಯಿಗೆ ಆಸಿಡ್ ಹಾಕಿ, ನೇಣು ಬಿಗಿದು ಹತ್ಯೆ ಮಾಡಿದ್ದಾರೆ.
ಚೆನ್ನೈ: ನೆರೆಯ ತಮಿಳುನಾಡಿನಲ್ಲಿ ಮತ್ತೊಂದು ಮರ್ಯಾದಾ ಹತ್ಯೆ ಪ್ರಕರಣ ದಾಖಲಾಗಿದ್ದು, ಯುವತಿಯ ಸ್ವಂತ ಸೋದರರೇ ಆಕೆಯ ಬಾಯಿಗೆ ಆಸಿಡ್ ಹಾಕಿ, ನೇಣು ಬಿಗಿದು ಹತ್ಯೆ ಮಾಡಿದ್ದಾರೆ.
ಮೂಲತಃ ತಮಿಳುನಾಡಿನ ಸೀವಲಪರಿ ಗ್ರಾಮದ ನಿವಾಸಿಯಾಗಿರುವ ಗೋಮತಿ ಎಂಬ 17 ವರ್ಷದ ಯುವತಿಯನ್ನು ಆಕೆಯ ಸ್ವಂತ ಸೋದರರೇ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ತಿಳಿದು ಬಂದಿದೆ. ಗೋಮತಿಯ ಸಹೋದರರಾದ ಮುರುಗನ್ ಮತ್ತು ಸುದಳೈ ಮುತ್ತು ಎಂಬುವವರು ದಲಿತ ಯುವಕನನ್ನು ಪ್ರೀತಿಸಿ ಪರಾರಿಯಾದಳೆಂಬ ಕಾರಣಕ್ಕಾಗಿ ಆಕೆಯೆ ಬಾಯಿಗೆ ಆಸಿಡ್ ಸುರಿದು ನಂತರ ನೇಣು ಬಿಗಿದು ಹತ್ಯೆ ಮಾಡಿದ್ದಾರೆ.
ಸೀವಲಪುರಿ ಗ್ರಾಮದ ನಿವಾಸಿಯಾದ ಗೋಮತಿ ಮತ್ತು ತಿರುವೆಂಗಡಪುರಂ ಗ್ರಾಮದ ದಲಿತ ಯುವಕ ಮುರುಗನ್ ಎಂಬುವವರು ಪರಸ್ಪರ ಪ್ರೀತಿಸುತ್ತಿದ್ದರು. ಕೆಲವೇ ದಿನಗಳ ಹಿಂದೆ ಕುಟುಂಬಸ್ಥರ ವಿರೋಧದ ನಡುವೆಯೂ ಯುವತಿಯು ಆತನೊಂದಿಗೆ ಪರಾರಿಯಾಗಿ ಬೇರೆ ಸಂಸಾರ ಹೂಡಿದ್ದಳು. ಸಹೋದರಿಯ ವರ್ತನೆಯಿಂದ ತೀವ್ರ ಆಕ್ರೋಶಗೊಂಡಿದ್ದ ಗೋಮತಿಯ ಸೋದರರು, ತಿರುವೆಂಗಡಪುರಂ ಗ್ರಾಮದಲ್ಲಿರುವ ಯುವಕನ ಮನೆಗೆ ತೆರಳಿ ಗೋಮತಿಯನ್ನು ಮನೆಗೆ ವಾಪಾಸಾಗುವಂತೆ ಮನವೊಲಿಸಿ ಕರೆತಂದಿದ್ದರು.
ನಂತರ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗೋಮತಿಯೊಂದಿಗೆ ಜಗಳಕ್ಕಿಳಿದ ಸೋದರರು, ಆಕೆಯೆ ಬಾಯಿಗೆ ಆಸಿಡ್ ಸುರಿದು ಹತ್ಯೆ ಮಾಡಿದ್ದಾರೆ. ನಂತರ ಯಾರಿಗೂ ಹತ್ಯೆ ಎಂಬ ಅನುಮಾನ ಮೂಡದಿರಲು ಆಕೆಯನ್ನು ತಮ್ಮ ಮನೆಯ ಫ್ಯಾನ್‌ಗೆ ನೇಣು ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ಇಬ್ಬರು ಸೋದರರನ್ನು ಬಂಧಿಸಿದ್ದು, ಅವರಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದಿದ್ದಾರೆ.