ಅಸಾರಾಂಗೆ ಭೂಮಿ ನೀಡಿಲ್ಲ: ದಿಗ್ವಿಜಯ್
ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ತಮ್ಮ ಅಧಿಕಾರಾವಧಿಯಲ್ಲಿ ಭೂಮಿ ನೀಡಿಲ್ಲ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಶಾಜಾಪುರ: ವಿವಾದಿತ ಸ್ವಯಂಘೋಷಿತ ದೇವಮಾನವ ಅಸಾರಾಂ ಬಾಪುಗೆ ತಮ್ಮ ಅಧಿಕಾರಾವಧಿಯಲ್ಲಿ ಭೂಮಿ ನೀಡಿಲ್ಲ ಎಂದು ಕಾಂಗ್ರೆಸ್ ವಕ್ತಾರ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಮಧ್ಯ ಪ್ರದೇಶದ ಶಾಜಾಪುರದಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್ ಅವರು, ತಾವು ತಮ್ಮ ಅಧಿಕಾರ ಅವಧಿಯಲ್ಲಿ ವಿವಾದಿತ ದೇವಮಾನವ ಅಸಾರಾಂ ಬಾಪು ಅವರಿಗೆ ಭೂಮಿಯನ್ನು ನೀಡಿಲ್ಲ ಎಂದು ಹೇಳಿದ್ದಾರೆ. ಅಂತೆಯೇ ತಾವೇನಾದರೂ ಆಸಾರಾಂ ಬಾಪು ಅವರಿಗೆ ಭೂಮಿ ನೀಡಿದ್ದೇ ಆದರೆ ಭೂಮಿಯ ಗುತ್ತಿಗೆಯನ್ನು ಬಿಜೆಪಿ ಸರ್ಕಾರ ರದ್ದು ಪಡಿಸಬಹುದಾಗಿದೆ. ಗುತ್ತಿಗೆ ರದ್ದು ಮಾಡಿಲ್ಲ ಇದರಿಂದಲೇ ತಿಳಿಯುತ್ತದೆ ನಾನು ಭೂಮಿ ನೀಡಿಲ್ಲ ಎಂದು ಹೇಳಿದರು.
ದಿಗ್ವಿಜಯ್ ಸಿಂಗ್ ಅವರು 1993ರಿಂದ 2003ರ ನಡುವೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ವೇಳೆ ಆಸಾರಾಂ ಬಾಪುಗೆ ಭೂಮಿ ನೀಡಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಈ ಬಗ್ಗೆ ಕೂಡ ಸ್ಪಷ್ಟನೆ ನೀಡಿರುವ ದಿಗ್ವಿಜಯ್ ಸಿಂಗ್ ಅವರು ರಾಜಕೀಯ ಪಕ್ಷಗಳೇ ಅಸಾರಾಂ ಅವರ ಆಶ್ರಮಕ್ಕೆ ಭೂಮಿ ನೀಡುವಂತೆ ಒತ್ತಡ ಹೇರಿದ್ದವು ಎಂದು ದಿಗ್ವಿಜಯ್ ಆರೋಪಿಸಿದ್ದಾರೆ.
ಯೋಗ ಗುರು ಬಾಬಾ ರಾಮ್ದೇವ್ ಅವರ ವಿರುದ್ಧವೂ ಕಿಡಿಕಾರಿರುವ ದಿಗ್ವಿಜಯ್ ಸಿಂಗ್, ರಾಮ್ದೇವ್ ಅವರ 1,100 ಕೋಟಿ ಆಸ್ತಿ ವಿವರ ಬಹಿರಂಗವಾಗಬೇಕು ಎಂದು ಆಗ್ರಹಿಸಿದ್ದಾರೆ.
ಸ್ವಯಂಘೋಷಿತ ದೇವ ಮಾನವ ಅಸಾರಾಂ ಬಾಪು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಇಂದೋರ್ ಪೊಲೀಸರಿಂದ ಬಂಧಿತರಾಗಿದ್ದು, ಅವರ ಆಶ್ರಮದ ಆಸ್ತಿ ವಿವಾದ ಇದೀಗ ಮಧ್ಯಪ್ರದೇಶ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಅಸಾರಾಂ ಅಶ್ರಮಕ್ಕೆ ಅಸ್ತಿ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿವೆ.