ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಗೌರವ ನೀಡದಿದ್ದರೂ ಸರಿ, ಅಪಮಾನ ಮಾಡಬೇಡಿ: ಮೋದಿ

ಯೋಧರಿಗೆ ಗೌರವ ನೀಡದಿದ್ದರೂ ಪರವಾಗಿಲ್ಲ, ಅವರಿಗೆ ಅಪಮಾನ ಮಾತ್ರ ಮಾಡಬೇಡಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

Srinivasa Murthy VN
Updated On : 15 Sept 2013, 4:20 am

ರೆವಾರಿ: ಹುತಾತ್ಮ ಯೋಧರಿಗೆ ಗೌರವ ನೀಡದಿದ್ದರೂ ಪರವಾಗಿಲ್ಲ, ಅವರಿಗೆ ಅಪಮಾನ ಮಾತ್ರ ಮಾಡಬೇಡಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.

ಹರ್ಯಾಣದ ರೆವಾರಿಯಲ್ಲಿ ಏರ್ಪಡಿಸಲಾಗಿದ್ದ ನಿವೃತ್ತ ಸೈನಿಕರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು, ಮೊದಲು ಹುತಾತ್ಮ ಯೋಧರಿಗೆ ನಮಸ್ಕರಿಸಿ ತಮ್ಮ ಭಾಷಣವನ್ನು ಆರಂಭಿಸಿದರು. 'ನಾನು ಪ್ರಧಾನಿ ಅಭ್ಯರ್ಥಿಯಾಗಿದ್ದಕ್ಕಿಂತಲೂ, ಯೋಧರ ಸಮಾವೇಶದಲ್ಲಿ ಪಾಲ್ಗೊಂಡಿದ್ದು ನನಗೆ ನಿಜಕ್ಕೂ ಸಂತಸ ತಂದಿದೆ. ನನಗೆ ಭಾರತೀಯ ಸೇನೆ ಮತ್ತು ಸೈನಿಕರೆಂದರೆ ಆಪಾರ ಗೌರವ. ಸೇನೆಗೆ ಸೇರುವುದು ಅತ್ಯಂತ ಗೌರವದ ವಿಚಾರವಾಗಿದ್ದು, ನಿವೃತ್ತಿ ಬಳಿಕ ಸೈನಿಕರು ಗೌರವದಿಂದ ಜೀವಸುವಂತಾಗಬೇಕು.

ನಿಜವಾದ ಜಾತ್ಯಾತೀತತೆ ಇರುವುದು ಸೇನೆಯಲ್ಲಿ ಮಾತ್ರ. ಸೇನೆಯಿಂದ ನಾವು ಜಾತ್ಯಾತೀತ ತತ್ವಗಳನ್ನು ಕಲಿಯಬೇಕಿದೆ. ಯೋಧರಿಗೆ ನೀವು ಗೌರವ ಸಲ್ಲಿಸದಿದ್ದರೂ ಪರವಾಗಿಲ್ಲ. ಆದರೆ ಅವರಿಗೆ ಅಪಮಾನ ಮಾಡಬೇಡಿ. ಸೇನೆಯನ್ನು ಆಧುನೀಕರಣಗೊಳಿಸ ಬೇಕಿದ್ದು, ಸೇನೆಗೆ ಯುವ ತೇಜಸ್ವಿಗಳನ್ನು ಸೇರ್ಪಡೆಗೊಳಿಸಿ. ಶಸ್ತ್ರಾಸ್ತ್ರಕ್ಕಾಗಿ ನಾವು ವಿದೇಶಗಳನ್ನು ಅವಲಂಭಿಸಿದ್ದೇವೆ. ಪ್ರತಿವರ್ಷ ನಾವು ಶಸ್ತ್ರಾಸ್ತ್ರಕ್ಕಾಗಿ ಅಪಾರ ಪ್ರಮಾಣದ ಬಂಡವಾಳವನ್ನು ತೊಡಗಿಸುತ್ತಿದ್ದೇವೆ. ಇದರಿಂದ ಸಾಕಷ್ಟು ಬಂಡವಾಳ ಹೊರ ದೇಶಕ್ಕೆ ಹರಿಯುತ್ತಿದೆ. ಬದಲಿಗೆ ನಾವೇ ಬೇರೆ ದೇಶಗಳಿಗೆ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವಂತಾಗಬೇಕು. ಭಾರತೀಯ ವಿಜ್ಞಾನಿಗಳು ಹಾರಿಸಿದ ಅಗ್ನಿ-5 ಕ್ಷಿಪಣಿಯ ಪ್ರಾಯೋಗಿಕ ಹಾರಾಟ ಸತತ ಎರಡನೇ ಬಾರಿಗೆ ಯಶಸ್ವಿಯಾಗಿದ್ದು, ಅದರಲ್ಲಿ ಪಾಲ್ಗೊಂಡಿದ್ದ ಎಲ್ಲ ವಿಜ್ಞಾನಿಗಳನ್ನು ಶ್ಲಾಘಿಸುತ್ತಿದ್ದೇನೆ.

ಜ್ಯಾತ್ಯಾತೀತೆಯ ಸೋಗಿನಲ್ಲಿ ಸಮಾಜವನ್ನು ಕೆಲವರು ತುಂಡರಿಸುತ್ತಿದ್ದಾರೆ. ದೇಶದಲ್ಲಿ ವೋಟ್‌ಬ್ಯಾಂಕ್ ರಾಜಕಾರಣ ರಾರಾಜಿಸುತ್ತಿದೆ. ದೇಶಕ್ಕೆ ಪ್ರಬಲ ನಾಯಕತ್ವದ ಅವಶ್ಯತೆ ಇದ್ದು, ನೆರೆಯ ದೇಶಗಳನ್ನು ಹತ್ತಿಕ್ಕಲು ಸಮರ್ಥ ನಾಯಕತ್ವ ಬೇಕು. ಗಡಿಯಲ್ಲಿ ಸೈನಿಕರ ಹತ್ಯೆ ನಿಜಕ್ಕೂ ಖಂಡನೀಯ. ಪಾಕ್ ಸೇನಾ ಸಮವಸ್ತ್ರದಲ್ಲಿದ್ದವರು ಭಾರತೀಯ ಯೋಧರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆದರೆ ಇದೇ ವಿಚಾರವಾಗಿ ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ನೀಡಿದ್ದ ಹೇಳಿಕೆ ನನಗೆ ನಿಜಕ್ಕೂ ನೋವುಂಟು ಮಾಡಿತ್ತು. ನಿರ್ಲಜ್ಜತನಕ್ಕೂ ಒಂದು ಮಿತಿ ಇರಬೇಕು. ಸಮಸ್ಯೆ ಇರುವುದು ಕೇಂದ್ರ ಸರ್ಕಾರದಲ್ಲಿ, ಸೇನೆಯಲ್ಲಿ ಅಲ್ಲ. ನೆರೆಯ ದೇಶಗಳಿಂದ ಭಾರತಕ್ಕೆ ತೊಂದರೆಯಾಗುತ್ತಿದ್ದು, ಪದೇ ಪದೇ ನೆರೆಯ ದೇಶಗಳು ನಮ್ಮ ಗಡಿ ಭಾಗವನ್ನು ಆಕ್ರಮಿಸುತ್ತಿವೆ. ನೆರೆಯ ದೇಶಗಳು ಭಾರತದ ವಿರುದ್ಧ ಸಮರ ಬಿಟ್ಟು, ಸಮರಸಕ್ಕೆ ಮುಂದಾಗಬೇಕು ಎಂದು ಮೋದಿ ಹೇಳಿದರು.

ಭಯೋತ್ಪಾದನೆ ಮತ್ತು ನಕ್ಸಲರ ಹಾವಳಿ ದೊಡ್ಡ ಸಮಸ್ಯೆಯಾಗಿದ್ದು, ಹಿಂಸೆ ಭಯೋತ್ಪಾದನೆ ವಿರುದ್ಧ ಜನಮತ ಒಗ್ಗೂಡಬೇಕು. ಭಾರತ ಈ ಹಿಂದೆ 60 ವರ್ಷದಲ್ಲಿ ಕಾಣದ ಅಭಿವೃದ್ಧಿ ಶೀಘ್ರ ಕಾಣಲಿದೆ. ಪಾಕ್‌ನಲ್ಲಿ ಪ್ರಜಾ ಸತ್ತಾತ್ಮಕ ಸರ್ಕಾರ ಆಡಳಿತಕ್ಕೆ ಬಂದಿದೆ. ಭಾರತ ವಿರೋಧಿ ನಿಲುವು ಬದಲಾಗುವ ವಿಶ್ವಾಸ ವಿತ್ತು. ಆದರೆ ನನ್ನ ನಂಬಿಕೆ ಹುಸಿಯಾಗಿದೆ. ಕೂಡಲೇ ಪಾಕ್ ಭಯೋತ್ಪಾದನೆಗೆ ನೆರವು ನೀಡುವುದನ್ನು ನಿಲ್ಲಿಸಬೇಕು. ಮುಂದಿನ 10 ವರ್ಷಗಳ ಕಾಲ ಪಾಕಿಸ್ತಾನ ಭಯೋತ್ಪಾದನೆಯನ್ನು ನಿಲ್ಲಿಸಿದರೆ ನಿಜಕ್ಕೂ ಆ ದೇಶ ಉದ್ಧಾರವಾಗುತ್ತದೆ ಎಂದು ಮೋದಿ ಹೇಳಿದರು.

ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಭಾಷಣ ಮಾಡಿದ ನರೇಂದ್ರ ಮೋದಿ, ರಕ್ಷಣಾ ಸಚಿವ ಆಂಟನಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement