ವಿಜೃಂಭಿಸಿದ ಯುವಿ: ಭಾರತ 'ಎ'ಗೆ ಗೆಲುವು
ಬೆಂಗಳೂರು: ಪ್ರವಾಸಿ ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧ ನಡೆಯುತ್ತಿರುವ ಏಕದಿನ ಕ್ರಿಕೆಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ಎ ತಂಡದ ಆಟಗಾರ ಯುವರಾಜ್ ಸಿಂಗ್ ಅವರು ಭರ್ಜರಿ ಬ್ಯಾಟಿಂಗ್ ನಡೆಸಿದ್ದರ ಪರಿಣಾಮವಾಗಿ, ಭಾರತ ಎ ತಂಡ 77 ರನ್‌ಗಳ ಗೆಲುವು ಸಾಧಿಸಿದೆ.
ವೆಸ್ಟ್ ಇಂಡೀಸ್ ಎ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿ ಇಂದು ಬೆಂಗಳೂರಿನಲ್ಲಿ ಆರಂಭವಾಗಿದ್ದು, ಕೆಟ್ಟ ಹವಾಮಾನದಿಂದಾಗಿ ಆರಂಭಿಕ ಪಂದ್ಯವನ್ನು 42 ಓವರ್‌ಗಳಿಗೆ ಸೀಮಿತ ಗೊಳಿಸಲಾಯಿತು. ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಎ ತಂಡ ಭರ್ಜರಿ ಬ್ಯಾಟಿಂಗ್ ನಡೆಸಿದೆ. ಭಾರತ ಎ ತಂಡದ ಪರವಾಗಿ ಯುವರಾಜ್ ಸಿಂಗ್, ಯೂಸುಫ್ ಪಠಾಣ್ ಮತ್ತು ಆಟಗಾರ ಮಂದೀಪ್ ಸಿಂಗ್ ಅವರ ಉತ್ತಮ ಬ್ಯಾಟಿಂಗ್‌ನಿಂದಾಗಿ ಭಾರತ ಎ ತಂಡ ವೆಸ್ಟ್ ಇಂಡೀಸ್ ಎ ವಿರುದ್ಧ 312 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಎ ತಂಡದ ಪರವಾಗಿ ಆರಂಭಿಕ ಆಟಗಾರರಾದ ಮಂದೀಪ್ ಸಿಂಗ್ ಮತ್ತು ಯೂಸುಫ್ ಪಠಾಣ್ ಅವರು ಉತ್ತಮವಾಗಿ ಬ್ಯಾಟಿಂಗ್ ನಡೆಸಿದರು. ಮಂದೀಪ್ ಸಿಂಗ್ 67 ರನ್(78 ಎಸೆತ) ಮತ್ತು ಯೂಸುಫ್ ಪಠಾಣ್ 70ರನ್ (32 ಎಸೆತ) ಗಳಿಸಿ ಉತ್ತಮ ಆರಂಭ ನೀಡಿದರು. ಈ ನಡುವೆ ಅನವಶ್ಯಕ ಹೊಡೆತಕ್ಕೆ ಕೈ ಹಾಕಿದ ಮಂದೀಪ್ ಸಿಂಗ್ ಅವರು 62 ರನ್‌ಗಳಿಗೆ ಔಟಾದರು. ನಂತರ ಕ್ರೀಸ್‌ಗೆ ಆಗಮಿಸಿದ ಉನ್ಮುಕ್ತ್ ಚಾಂದ್(1ರನ್) ಮತ್ತು ರಾಬಿನ್ ಉತ್ತಪ್ಪ(23ರನ್) ಅವರು ಬಂದ ವೇಗದಲ್ಲಿಯೇ ಪೆವಿಲಿಯನ್‌ಗೆ ಹಿಂದುರಿಗಿದರು. 2 ಪ್ರಮುಖ ವಿಕೆಟ್‌ಗಳ ಪತನದ ನಂತರ ಸಂಕಷ್ಟದಲ್ಲಿ ಸಿಲುಕಿದ್ದ ಭಾರತ ತಂಡಕ್ಕೆ ಯುವರಾಜ್ ಸಿಂಗ್ ಅವರು ಆಸರೆಯಾಗಿ ನಿಂತರು. ಅಲ್ಲದೆ ಭರ್ಜರಿ ಹೊಡೆತಗಳ ಮೂಲಕ ಶತಕ ಸಂಭ್ರಮವನ್ನು ಆಚರಿಸಿದ ಅವರು ಭಾರತ ಎ ತಂಡ 312ರನ್‌ಗಳ ಬೃಹತ್ ಮೊತ್ತ ಪೇರಿಸುವಂತೆ ಮಾಡಿದರು.
ನಂತರ ಬ್ಯಾಂಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಎ ತಂಡ, ಭಾರತೀಯ ಬೌಲರ್‌ಗಳ ದಾಳಿಗೆ ತತ್ತರಿಸಿ ಹೋದರು. ಕೇವಲ 235ರನ್ ಗಳಿಗೆ ಆಲ್‌ಔಟ್ ಆಗುವ ಮೂಲಕ 77 ರನ್‌ಗಳ ಸೋಲನ್ನು ಅನುಭವಿಸಿದೆ. ಭಾರತದ ಪರ ವಿನಯ್ ಕುಮಾರ್, ಯೂಸುಫ್ ಪಠಾಣ್, ರಾಹುಲ್ ಶರ್ಮಾ ಮತ್ತು ಸುಮಿತ್ ನರ್ವಾಲ್ ಅವರು ತಲಾ 2 ವಿಕೆಟ್ ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಕಳೆದ ಜನವರಿಯಲ್ಲಿ ಕೊನೆಯ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಆಡಿದ್ದ ಯುವರಾಜ್ ಸಿಂಗ್ ಅವರು, ತದ ನಂತರ ಯಾವುದೇ ರೀತಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ 3 ಪಂದ್ಯಗಳ ಏಕದಿನ ಸರಣಿ ಅನೌಪಚಾರಿಕ ಸರಣಿಯಾಗಿದ್ದು, ಈ ಸರಣಿಯ ಮೊದಲ ಪಂದ್ಯದಲ್ಲಿಯೇ ಯುವಿ ಮತ್ತು ಯೂಸುಫ್ ಮಿಂಚು ಹರಿಸಿ ಭಾರತ ತಂಡಕ್ಕೆ ಪುನರ್ ಪ್ರವೇಶ ಪಡೆಯಲು ಹಾತೊರೆಯುತ್ತಿದ್ದಾರೆ.