ಪಾಕಿಸ್ತಾನದಲ್ಲಿ ಪ್ರಬಲ ಬಾಂಬ್ ಸ್ಫೋಟ; 29 ಸಾವು
ನವದೆಹಲಿ: ಪಾಕಿಸ್ತಾನದ ಪೇಶಾವರದಲ್ಲಿ ಉಗ್ರರು ನಡೆಸಿದ ಪ್ರಬಲ ಕಾರ್ಬಾಂಬ್ ದಾಳಿಯಲ್ಲಿ ಕನಿಷ್ಟ 29 ಮಂದಿ ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಪೇಶಾವರದ ಖಾನ್ ರಜಾಕ್ ಪೊಲೀಸ್ ಠಾಣೆಯನ್ನು ಗುರಿಯಾಗಿಸಿಕೊಂಡು ಉಗ್ರರು ಈ ದಾಳಿ ನಡೆಸಿದ್ದು, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರ ಭೇಟಿಯನ್ನು ಖಂಡಿಸಿ ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಫೋಟದಿಂದಾಗಿ 6 ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 29 ಮಂದಿ ಧಾರುಣವಾಗಿ ಸಾವಿಗೀಡಾಗಿದ್ದಾರೆ. ಸ್ಫೋಟದ ತೀವ್ರತೆಗೆ ಠಾಣೆಯ ಸಮೀಪ ನಿಲ್ಲಿಸಲಾಗಿದ್ದ ಹಲವು ವಾಹನಗಳು ಜಖಂಗೊಂಡಿದ್ದು, ಹಲವು ಕಟ್ಟಡಗಳು ಬಿರುಕು ಬಿಟ್ಟಿದೆ. ಠಾಣೆಯ ಸಮೀಪ ನಿಲ್ಲಿಸಲಾಗಿದ್ದ ಕಾರಿನಲ್ಲಿ ಉಗ್ರರು ಸ್ಫೋಟಕವನ್ನು ಅಡಗಿಸಿಟ್ಟು, ನಂತರ ರಿಮೋಟ್ ಮೂಲಕ ಸ್ಫೋಟಗೊಳಿಸಿದ್ದಾರೆ ಎಂದು ತಜ್ಞರು ತಿಳಿಸಿದ್ದಾರೆ.
ಕಳೆದ 10 ದಿನಗಳಲ್ಲಿ ಪೇಶಾವರದಲ್ಲಿ ಉಗ್ರರು ನಡೆಸುತ್ತಿರುವ 10ನೆಯ ದಾಳಿ ಇದಾಗಿದ್ದು, ಕಳೆದ ಭಾನುವಾರವಷ್ಟೇ ಚರ್ಚ್ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 83ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.