ಪಾಕ್ ಪ್ರಧಾನಿ ವಿರುದ್ಧ ಹರಿಹಾಯ್ದ ನರೇಂದ್ರ ಮೋದಿ
'ನಮ್ಮ ದೇಶದ ಪ್ರಧಾನಿ ಕುರಿತು ಮಾತನಾಡಲು ನಿಮಗೆಷ್ಟು ಧೈರ್ಯ?..ಈ ರೀತಿ ಹೇಳಿಕೆ ನೀಡಲು ನಿಮಗಾವ ಹಕ್ಕಿದೆ? ಎಂದು ನರೇಂದ್ರ ಮೋದಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿ: ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರು ನೀಡಿರುವ (ಗ್ರಾಮೀಣ ಮಹಿಳೆ) ಹೇಳಿಕೆ ವಿರುದ್ಧ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಿದ್ದ ಬಿಜೆಪಿ ವಿಕಾಸ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ದೆಹಲಿಯಲ್ಲಿ ಇಂತಹ ದೊಡ್ಡ ರ್ಯಾಲಿ ನಡೆಯುತ್ತಿರುವುದು ಇದೇ ಮೊದಲು. ರ್ಯಾಲಿ ಯಶಸ್ವಿಯಾಗಲು ಶ್ರಮಿಸಿದ ಎಲ್ಲ ಬಿಜೆಪಿ ಕಾರ್ಯಕರ್ತರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸಿದರು.
ಇದೇ ವೇಳೆ ಪ್ರಧಾನಿ ಮನಮೋಹನ್ ಸಿಂಗ್ ಕುರಿತು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ನೀಡಿರುವ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಮೋದಿ, ಪಾಕ್ ಪ್ರಧಾನಿ ವಿರುದ್ಧ ಹರಿಹಾಯ್ದರು. 'ದೇಶದ ಪ್ರಧಾನಿ ವಿರುದ್ಧ ನವಜ್ ಶರೀಫ್ ನೀಡಿರುವ ಹೇಳಿಕೆ ಗಂಭೀರ ವಿಚಾರವಾಗಿದ್ದು, ನಾವು ಇದನ್ನು ಲಘುವಾಗಿ ಪರಿಗಣಿಸಬಾರದು. ಪಾಕ್ ಪ್ರಧಾನಿ ನಮ್ಮ ಪ್ರಧಾನಿಗೆ ಅಗೌರವ ತೋರಿದ್ದಾರೆ. ಇದು ಮನಮೋಹನ್ ಸಿಂಗ್ ಅವರಿಗಾದ ಅವಮಾನವಲ್ಲ ಬದಲಿಗೆ ದೇಶಕ್ಕಾದ ಅವಮಾನ ಎಂದು ಮೋದಿ ಹೇಳಿದರು.
'ನಮ್ಮ ದೇಶದ ಪ್ರಧಾನಿ ಕುರಿತು ಮಾತನಾಡಲು ನಿಮಗೆಷ್ಟು ಧೈರ್ಯ?..ಈ ರೀತಿ ಹೇಳಿಕೆ ನೀಡಲು ನಿಮಗಾವ ಹಕ್ಕಿದೆ? ಎಂದು ನರೇಂದ್ರ ಮೋದಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ದೇಶದ ಪ್ರತಿಷ್ಠೆಗೆ ಧಕ್ಕೆ ತರುವಂತಹ ವಿಚಾರಗಳನ್ನು ನಾವು ಎಂದಿಗೂ ಸಹಿಸುವುದಿಲ್ಲ. ಪ್ರಧಾನಿ ಸಿಂಗ್ ಅವರಿಗೆ ತಮ್ಮ ಪಕ್ಷದಲ್ಲಿಯೇ ಬೆಲೆಯಿಲ್ಲ. ಹೀಗಿರುವಾಗ ಬೇರೆ ದೇಶಗಳು ಗೌರವ ನೀಡಲು ಹೇಗೆ ಸಾಧ್ಯ. ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಅವರದೇ ಪಕ್ಷದ ರಾಹುಲ್ ಗಾಂಧಿ ಅವರು ಅಗೌರವ ತೋರಿದ್ದಾರೆ. ಹೀಗಾಗಿ ಶರೀಫ್ ಅವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಮೋದಿ ಟೀಕಿಸಿದರು.
ದೆಹಲಿಯಲ್ಲಿ ಹಲವು ಸರ್ಕಾರಗಳ ಆಡಳಿತ ನಡೆಸುತ್ತಿವೆ. ಅಮ್ಮ-ಮಗ-ಅಳಿಯನ ಸರ್ಕಾರ ಅಸ್ತಿತ್ವದಲ್ಲಿದೆ. ದೆಹಲಿಯನ್ನು ಹಲವು ಸಮಸ್ಯೆಗಳು ಕಾಡುತ್ತಿವೆ. ದೆಹಲಿಯಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಎಂಬ ಕೂಗು ಕೇಳಿಬರುತ್ತಿದ್ದು, ಸಿಎಂ ಶೀಲಾ ದೀಕ್ಷಿತ್ ಕೂಡು ಹೆಣ್ಣು ಮಗಳಾಗಿದ್ದಾರೆ. ಆದರೆ ಅವರು ಈ ಬಗ್ಗೆ ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ದಾರೆ. ಅಲ್ಲದೆ ಹೆಣ್ಣು ಮಕ್ಕಳನ್ನು ಮನೆಯಲ್ಲಿರುವಂತೆ ಹೇಳಿಕೆ ನೀಡುತ್ತಿದ್ದಾರೆ. ರಾಜ್ಯದ ಹೆಣ್ಣು ಮಕ್ಕಳ ರಕ್ಷಣೆಯ ಹೊಣೆ ಮುಖ್ಯಮಂತ್ರಿಗಳದ್ದೇ ಅಲ್ಲವೆ?
ಯುಪಿಎ ಸರ್ಕಾರದ ಭ್ರಷ್ಟಾಚಾರದಿಂದ ದೇಶದ ಪ್ರತಿಷ್ಠೆಗೆ ಧಕ್ಕೆಯಾಗಿದ್ದು, ದೇಶದ ಭವಿಷ್ಯವನ್ನು ಅವರು ಅಂಧಕಾರಕ್ಕೆ ದೂಡಿದ್ದಾರೆ. ಕಾಮನ್ ವೆಲ್ತ್ ಗೇಮ್ಸ್ ವೇಳೆ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ಸೂಕ್ತ ಕ್ರಮ ಕೈಗೊಂಡಿಲ್ಲ. ಭಾರತದ ಬಡತನವನ್ನು ಹೊರ ದೇಶಗಳು ಬಂಡವಾಳ ಮಾಡಿಕೊಳ್ಳುತ್ತಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆ ಕುಸಿಯುತ್ತಿದೆ. ಇದಕ್ಕೆಲ್ಲಾ ಪರಿಷ್ಕಾರ ಒಂದೇ. ಭ್ರಷ್ಟಾಚಾರದ ಕೂಪವಾಗಿರುವ ಯುಪಿಎ ಸರ್ಕಾರವನ್ನು ಕಿತ್ತೊಗೆಯಬೇಕು.
2014ರಲ್ಲಿ ದೆಹಲಿಯಲ್ಲಿ ನಾವು ಕನಸಿನ ತಂಡವನ್ನು ನೋಡಬಯಸುತ್ತಿದ್ದೇವೆ. ನಿಮ್ಮ ಕನಸನ್ನು ಈಡೇರಿಸಲು ನಾನು ಸದಾ ಬದ್ಧನಾಗಿರುತ್ತೇನೆ. ನಾನು ನಿಮ್ಮ ಸೇವೆಗೆ ಸಿದ್ಧನಾಗಿದ್ದು, ನಮ್ಮ ಮೇಲೆ ನೀವು ಇಟ್ಟಿರುವ ಭರವಸೆಯನ್ನು ಈ ಹಿಂದೆಯೂ ಹುಸಿ ಮಾಡಿಲ್ಲ. ಮುಂದೆಯೂ ಮಾಡುವುದಿಲ್ಲ ಎಂದು ಮೋದಿ ಹೇಳಿದರು.