ಬಿಸಿಸಿಐ ಅಧ್ಯಕ್ಷರಾಗಿ ಮತ್ತೆ 'ಶ್ರೀನಿ' ಪುನರಾಯ್ಕೆ
ತೀವ್ರ ಟೀಕೆಗೆ ಒಳಗಾಗಿದ್ದ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ಮತ್ತೊಮ್ಮೆ ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷ ಗಾದಿಗೇರಿದ್ದಾರೆ.
ಚೆನ್ನೈ: ಸ್ಪಾಟ್ ಫಿಕ್ಸಿಂಗ್ ಹಗರಣದಿಂದ ತೀವ್ರ ಟೀಕೆಗೆ ಒಳಗಾಗಿದ್ದ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರು ಮತ್ತೊಮ್ಮೆ ಅವಿರೋಧವಾಗಿ ಬಿಸಿಸಿಐ ಅಧ್ಯಕ್ಷ ಗಾದಿಗೇರಿದ್ದಾರೆ.
ಚೆನ್ನೈನಲ್ಲಿ ಇಂದು ನಡೆದ ಬಿಸಿಸಿಐ ವಾರ್ಷಿಕ ಸಮಾನ್ಯ ಸಭೆಯಲ್ಲಿ ಶ್ರೀನಿವಾಸನ್ ಅವರನ್ನು ಮತ್ತೊಮ್ಮೆ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಶ್ರೀನಿವಾಸನ್ ಕಾರ್ಯ ವೈಖರಿ ಮತ್ತು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಅವರ ಅಳಿಯ ಮೇಯಪ್ಪನ್ ಅವರ ಪಾತ್ರದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಬಿಸಿಸಿಐ ಪದಾಧಿಕಾರಿಗಳು 'ಶ್ರೀನಿ' ತಲೆದಂಡಕ್ಕೆ ಆಗ್ರಹಿಸಿದ್ದರು. ಆದರೆ ಚೆನ್ನೈನಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಶ್ರೀನಿವಾಸನ್ ಅವರನ್ನು ಅಧ್ಯಕ್ಷೀಯ ಸ್ಥಾನದ ಅಭ್ಯರ್ಥಿ ಎಂದು ಘೋಷಸಿದಾಗ ಯಾವೊಬ್ಬ ಸದಸ್ಯರು ಕೂಡ ವಿರೋಧ ವ್ಯಕ್ತಪಡಿಸಲಿಲ್ಲ. ಹೀಗಾಗಿ ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆದರೆ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ತಮ್ಮ ಅಳಿಯ ಗುರುನಾಥನ್ ಮೇಯಪ್ಪನ್ ಅವರ ಪಾತ್ರದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಬಿಹಾರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಆದಿತ್ಯಾ ವರ್ಮಾ ಅವರು ಶ್ರೀನಿವಾಸನ್ ರಾಜಿನಾಮೆಗೆ ಆಗ್ರಹಿಸಿದ್ದರು. ಅಲ್ಲದೆ ಅವರ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ದಾವೆ ಕೂಡ ಹೂಡಿದ್ದರು. ಪ್ರಕರಣವು ವಿಚಾರಣೆ ಹಂತದಲ್ಲಿದ್ದು, ಸುಪ್ರೀಂಕೋರ್ಟ್ ಅಂತಿಮ ತೀರ್ಪು ನೀಡುವವರೆಗೂ ಶ್ರೀನಿವಾಸನ್ ಅಧಿಕಾರ ಸ್ವೀಕರಿಸುವಂತಿಲ್ಲ ಎಂದು ತಿಳಿದು ಬಂದಿದೆ.