ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

'ಆಂಧ್ರ ವಿಭಜನೆ': ಅಧಿವೇಶನ ಕರೆಯಲು ಜಗನ್ ಆಗ್ರಹ

Srinivasa Murthy VN
Updated On : 30 Sept 2013, 5:42 am

ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿವಾದಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನ ಕರೆಯಬೇಕು ಎಂದು ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.

ಆಂಧ್ರ ಪ್ರದೇಶ ವಿಭಜನೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಹೈದರಾಬಾದಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಜಗನ್ ಮೋಹನ್ ರೆಡ್ಡಿ ಅವರು, ರಾಜ್ಯ ವಿಭಜನೆ ಸಂಬಂಧ ರಾಜಕೀಯ ಪಕ್ಷಗಳು ನಾಟಕ ಮಾಡುತ್ತಿವೆ. ತಮ್ಮ ರಾಜಕೀಯ ದುರುದ್ದೇಶಕ್ಕಾಗಿ ರಾಜ್ಯ ವಿಭಜನೆಗೆ ಬೆಂಬಲ ವ್ಯಕ್ತಪಡಿಸುತ್ತಿವೆ ಎಂದು ಜಗನ್ ಹೇಳಿದರು.

ಅಲ್ಲದೆ ಆಂಧ್ರ ವಿಭಜನೆ ಸಂಬಂಧ ರಾಜ್ಯ ವಿಧಾನಸಭಾ ಅಧಿವೇಶನ ಕರೆಯುವಂತೆಯೂ ಮತ್ತು ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲು ಅವಕಾಶ ನೀಡಬೇಕು ಎಂದು ಜಗನ್ ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ. ಆಂಧ್ರ ವಿಭಜನೆಗೆ ವೈಎಸ್ಆರ್ ಕಾಂಗ್ರೆಸ್ ಸೇರಿದಂತೆ ಎಐಎಂ ಪಕ್ಷ ಮತ್ತು ಸಿಪಿಎಂ ಪಕ್ಷಗಳು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ಅಖಂಡ ಆಂಧ್ರದ ಪರವಾಗಿವೆ. ಉಳಿದ ಪಕ್ಷಗಳು ನಾಟಕ ಮಾಡುತ್ತಿವೆ ಎಂದು ಜಗನ್ ಆರೋಪಿಸಿದರು.

ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ವಿವಾದ ಆಂಧ್ರ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಉಂಟುಮಾಡಿದ್ದು, ಸತತ 2 ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆ ಇಂದಿಗೂ ಮುಂದುವರಿದಿದೆ. ಅಲ್ಲದೆ ನಿನ್ನೆಯಷ್ಟೇ ಆಂಧ್ರ ವಿಭಜನೆಯ ಪರವಾಗಿ ಮತ್ತು ವಿರುದ್ಧವಾಗಿ 2 ಪ್ರತ್ಯೇಕ ಸಮಾವೇಶಗಳು ನಡೆದಿದ್ದವು. ಕರ್ನೂಲು ಜಿಲ್ಲೆಯ ಸರ್ಕಾರಿ ಕಾಲೇಜು ಮೈದಾನದಲ್ಲಿ ಅಖಂಡ ಆಂಧ್ರವನ್ನು ಬೆಂಬಲಿಸಿ ಲಕ್ಷಾಂತರ ಹೋರಾಟಗಾರರು ನಿನ್ನೆ ಸಭೆ ಸೇರಿ ವಿಭಜನೆಗೆ ಒಕ್ಕೋರಲಿನ ವಿರೋಧ ವ್ಯಕ್ತಪಡಿಸಿದರು.

ಅಂತೆಯೇ ಹೈದರಾಬಾದಿನಲ್ಲಿ ಟಿಆರ್ಎಸ್ ಪಕ್ಷದ ನೇತೃತ್ವದಲ್ಲಿ ಸಭೆ ಸೇರಿದ್ದ ತೆಲಂಗಾಣ ಪರ ಹೋರಾಟಗಾರರು ಅಖಂಡ ಆಂಧ್ರ ಹೋರಾಟಗಾರರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅಲ್ಲದೆ ಹೈದರಾಬಾದ್ ನಗರವನ್ನು ಯಾವುದೇ ಕಾರಣಕ್ಕೂ ಆಂಧ್ರ ಪ್ರದೇಶಕ್ಕೆ ಸೇರಿಸಲು ತಾವು ಬಿಡುವುದಿಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement