ಕಡಪಗೆ ತೆರಳಲು ಜಗನ್ ಗೆ 'ಸಿಬಿಐ' ಷರತ್ತು ಬದ್ಧ ಅಪ್ಪಣೆ
ಹೈದರಾಬಾದ್: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ವೈಎಸ್ ಜಗನ್ ಅವರು ಕಡಪ ಜಿಲ್ಲೆಗೆ ತೆರಳಲು ಸಿಬಿಐ ವಿಶೇಷ ನ್ಯಾಯಾಲಯ ಷರತ್ತುಬದ್ಧ ಅಪ್ಪಣೆ ನೀಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಕಣ ಸಂಬಂಧ ಸತತ 16 ತಿಂಗಳುಗಳ ಕಾಲ ಸೆರೆವಾಸದಲ್ಲಿದ್ದ ವೈಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಜಗನ್ ಮೋಹನ್ ರೆಡ್ಡಿ ಅವರು, ಆಂಧ್ರ ವಿಭಜನೆಯನ್ನು ವಿರೋಧಿಸಿ ಕಡಪ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಬೇಕು ಎಂದು ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು. ಜಗನ್ ಅವರ ಮನವಿಯನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಜಗನ್‌ಗೆ ಷರತ್ತು ಬದ್ಧ ಅಪ್ಪಣೆ ನೀಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಜಗನ್ ತಮ್ಮ ವರ್ಚಸ್ಸನ್ನು ಬಳಸಿ ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆಯೂ ಮತ್ತು ನ್ಯಾಯಾಲಯ ಸೂಚಿಸಿದ ಅಧಿಕಾರಿಗಳ ಭದ್ರತೆಯ ನಡುವೆಯಲ್ಲಿಯೇ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಿಬಿಐ ವಿಶೇಷ ನ್ಯಾಯಾಲಯ ಸೂಚಿಸಿದೆ.
ಇದಕ್ಕೂ ಮೊದಲು ಸಿಬಿಐ ಪರ ವಕೀಲರು ಜಗನ್ ಅವರ ಮನವಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೆ ಪ್ರಕರಣ ಸಂಬಂಧ ಸಂಸದ ಜಗನ್ ಅವರು ಸಾಕ್ಷಿಗಳ ಪ್ರಭಾವ ಬೀರುವ ಸಾಧ್ಯತೆ ಇದ್ದು, ಅವರಿಗೆ ಅಪ್ಪಣೆ ನೀಡಬಾರದು ಎಂದು ಮನವಿ ಮಾಡಿದ್ದರು. ಉಭಯ ವಕೀಲರ ವಾದವನ್ನು ಆಲಿಸಿದ ನ್ಯಾಯಾಲಯ ಜಗನ್‌ಗೆ ಹೈದ್ರಾಬಾದ್ ತೊರೆಯಲು ಷರತ್ತು ಬದ್ಧ ಅಪ್ಪಣೆ ನೀಡಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಳೆದ 16 ತಿಂಗಳುಗಳಿಂದ ಸಿಬಿಐ ಅಧಿಕಾರಿಗಳ ವಶದಲ್ಲಿದ್ದ ವೈಎಸ್ ಜಗನ್ ಅವರು, ಇತ್ತೀಚೆಗೆ ಶರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ನ್ಯಾಯಾಲಯ ವಿಧಿಸಿದ್ದ ಷರತ್ತುಗಳ ಪೈಕಿ ಸಾಕ್ಷ್ಯಗಳ ಮೇಲೆ ಪ್ರಭಾವ ಬೀರಬಾರದು. ಸಾಕ್ಷ್ಯಗಳನ್ನು ನಾಶಪಡಿಸಬಾರದು ಮತ್ತು ಹೈದರಾಬಾದ್ ನಗರವನ್ನು ತೊರೆಯಬಾರದು ಎಂಬ ಅಂಶಗಳಿದ್ದವು.