ನನ್ನನ್ನು ಕಟ್ಟಿಹಾಕಲು ಸಾಧ್ಯವಿಲ್ಲ: ಮೋದಿ
ಸಿಬಿಐ ಅಥವಾ ಇನ್ನಿತರೆ ಸಂಸ್ಥೆಗಳಿಂದ ತಮ್ಮನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್ಗೆ ಸವಾಲು ಒಡ್ಡಿದರು.
ಮುಂಬೈ: ಕಾಂಗ್ರೆಸ್ ಸಿಬಿಐ ಅಸ್ತ್ರವನ್ನು ಬಳಸಿ ತನ್ನ ವಿರೋಧಿಗಳನ್ನು ಕಟ್ಟಿಹಾಕಬಹುದು. ಆದರೆ ನನ್ನನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದರು.
ಮುಂಬೈನಲ್ಲಿ ನಡೆದ ಬಿಜೆಪಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಅವರು, ಕಳೆದ 10 ವರ್ಷಗಳಿಂದ ಕಾಂಗ್ರೆಸ್ ಸರ್ಕಾರದಿಂದ ಮಹಾರಾಷ್ಟ್ರ ರಾಜ್ಯಕ್ಕೆ ಮತ್ತು ಕೇಂದ್ರ ಸರ್ಕಾರದಿಂದ ದೇಶಕ್ಕೆ ಸಾಕಷ್ಟು ಅನ್ಯಾಯವಾಗಿದೆ. ಯುಪಿಎ ಸರ್ಕಾರದಿಂದ ಮಹಾರಾಷ್ಟ್ರದ ಜನತೆ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಂಗ್ರೆಸ್ ಸಿಬಿಐ ಸಂಸ್ಥೆಯನ್ನು ಬಳಸಿ ತನ್ನ ವಿರುದ್ಧ ಧನಿ ಎತ್ತಿದವರನ್ನು ಮಟ್ಟಹಾಕುವ ಕೆಲಸ ಮಾಡುತ್ತಿದೆ.
ಈ ಹಿಂದೆ ಕಾಂಗ್ರೆಸ್ ವಿರುದ್ಧ ಧನಿ ಎತ್ತಿದ್ದ ಮುಲಾಯಂ ಸಿಂಗ್ ಯಾದವ್ ಮತ್ತು ಮಾಯಾವತಿ ಅವರ ವಿರುದ್ಧ ಸಿಬಿಐ ಅನ್ನು ಬಿಟ್ಟು ಅವರನ್ನು ಯುಪಿಎ ಕಟ್ಟಿಹಾಕಿತ್ತು. ಕಾಂಗ್ರೆಸ್ ನನ್ನನ್ನು ನೇರ ಗುರಿಯಾಗಿಸಿಕೊಂಡಿದ್ದು, ನನ್ನ ವಿರುದ್ಧವೂ ಹಲವು ಸಂಸ್ಥೆಗಳನ್ನು ಎತ್ತಿಕಟ್ಟಿ ನನ್ನನ್ನು ಕಟ್ಟಿಹಾಕುವ ಯತ್ನ ಮಾಡುತ್ತಿದೆ.
ಆದರೆ ನನ್ನನ್ನು ಕಟ್ಟಿ ಹಾಕಲು ಕಾಂಗ್ರೆಸ್ನಿಂದ ಸಾಧ್ಯವಿಲ್ಲ ಕಾಂಗ್ರೆಸ್ ಇಂತಹ ಕೆಲಸಗಳನ್ನು ನಿಲ್ಲಿಸಲಿ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆ ಅವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ನರೇಂದ್ರ ಮೋದಿ ಹೇಳಿದರು.
ಇಂದು ಕೈಗಾರಿಕೋಧ್ಯಮಿಗಳು ಮತ್ತು ವರ್ತಕರ ಸಮಾವೇಶದಲ್ಲಿ ಪಾಲ್ಗೊಳ್ಳಲು ಮುಂಬೈಗೆ ಆಗಮಿಸಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರು ಅಭೂತ ಪೂರ್ವ ಸ್ವಾಗತ ನೀಡಿದರು. ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರನ್ನು ನೋಡಿ ಪುಳಕಿತರಾದ ನರೇಂದ್ರ ಮೋದಿ ಅವರು, ಅಲ್ಲಿಯೇ ಚುಟುಕ ಭಾಷಣ ಆರಂಭಿಸಿದರು.
ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಮೋದಿ ಸಿಬಿಐ ಅಥವಾ ಇನ್ನಿತರೆ ಸಂಸ್ಥೆಗಳಿಂದ ತಮ್ಮನ್ನು ಕಟ್ಟಿ ಹಾಕಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ಗೆ ನೇರ ಸವಾಲು ಒಡ್ಡಿದರು.