ಅಲ್ ಖೈದಾ ಟ್ವಿಟರ್ ಖಾತೆ ಅಮಾನತು
ನ್ಯೂಯಾರ್ಕ್: ನಿಷೇಧಿತ ಉಗ್ರ ಸಂಘಟನೆ ಅಲ್ ಖೈದಾದ ಟ್ವಿಟರ್ ಖಾತೆಯನ್ನು ಟ್ವಿಟರ್ ಸಂಸ್ಥೆ ಅಮಾನತುಗೊಳಿಸಿದೆ.
ಕಳೆದ ಸೆಪ್ಟೆಂಬರ್ 24ರಂದು ಅಸ್ತಿತ್ವಕ್ಕೆ ಬಂದಿದ್ದ ಖಾತೆಯನ್ನು ಟ್ವಿಟರ್ ಸಂಸ್ಥೆ ಅಮಾನತು ಮಾಡಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬೇನಾಮಿ ಹೆಸರಲ್ಲಿ ಅಲ್ ಖೈದಾ ಸಂಘಟನೆ ಈ ಟ್ವಿಟರ್ ಖಾತೆಯನ್ನು ನಿಯಂತ್ರಿಸುತ್ತಿತ್ತು ಮತ್ತು ಅರೇಬಿಕ್ ಭಾಷೆಯಲ್ಲಿದ್ದ ಈ ಖಾತೆಗೆ ಸುಮಾರು 1.500 ಹಿಟ್ಸ್ಗಳು ಬಂದಿದ್ದವು. ಅಲ್ಲದೆ ಈ ಖಾತೆಯ ಬಳಕೆದಾರರು ಭಯೋತ್ಪಾದನೆ ಕುರಿತಂತೆ 47 ಬಾರಿ ಟ್ವೀಟ್ ಮಾಡಿದ್ದರು ಎಂದು ತಿಳಿದು ಬಂದಿದೆ.
ಖಾತೆಯನ್ನು ಅಮಾನತುಗೊಳಿಸಿದರ ಕುರಿತು ಟ್ವಿಟರ್ ಸಂಸ್ಥೆ ಯಾವುದೇ ರೀತಿಯ ಸ್ಪಷ್ಟನೆ ನೀಡಿಲ್ಲ. ಆದರೆ ಟ್ವಿಟರ್ನ ನಿಯಮಾವಳಿಗಳ ಪ್ರಕಾರ ಧಾರ್ಮಿಕತೆಗೆ ಭಂಗ ತರುವಂತಹ, ಹಿಂಸೆಗೆ ಪ್ರಚೋದನೆ ನೀಡುವಂತಹ ಮತ್ತು ಬೆದರಿಕೆ ಹಾಕುವಂತಹ ಅಂಶಗಳು ಕಂಡು ಬಂದರೆ ಅಂತಹ ಖಾತೆಯನ್ನು ಅಮಾನತುಗೊಳಿಸುವ ಅಧಿಕಾರ ಸಂಸ್ಥೆಗೆ ಇದೆ ಎಂದು ಟ್ವಿಟರ್ ಹೇಳಿಕೊಂಡಿದೆ.
ಅಲ್ಲದೆ ಕೆಲವು ದಿನಗಳ ಹಿಂದೆಯೇ ಈ ಖಾತೆಯ ಬಗ್ಗೆ ಅಮೆರಿಕದ ಭದ್ರತಾ ಸಂಸ್ಥೆಗಳು ಟ್ವಿಟರ್ಗೆ ಮಾಹಿತಿ ನೀಡಿದ್ದು, ಹಲವು ಪ್ರಚೋದನಾತ್ಮಕ ಹೇಳಿಕೆ ಪ್ರಕಟವಾಗಿದ್ದರ ಬಗ್ಗೆಯೂ ಮಾಹಿತಿ ದೊರೆತ ಹಿನ್ನಲೆಯಲ್ಲಿ ಟ್ವಿಟರ್ ಸಂಸ್ಥೆ ಈ ಖಾತೆಯನ್ನು ಅಮಾನತು ಮಾಡಿದೆ. ಅಂತೆಯೇ ಸೊಮಾಲಿಯಾ ಮೂಲದ ಉಗ್ರ ಸಂಘಟನೆ ಅಲ್ ಶಬಾಬ್ ಕೂಡ ಟ್ವಿಟರ್ ಖಾತೆಯನ್ನು ಹೊಂದಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಆ ಖಾತೆಯನ್ನು ಕೂಡ ಶೀಘ್ರದಲ್ಲಿಯೇ ಅಮಾನತು ಮಾಡಲಾಗುವುದು ಎಂದು ಟ್ವಿಟರ್ ಸಂಸ್ಥೆ ತಿಳಿಸಿದೆ.