ಖಂಡ್ವಾ ಜೈಲಿನಿಂದ 7 ಸಿಮಿ ಉಗ್ರರು ಪರಾರಿ
ಭೋಪಾಲ: ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಭೋಪಾಲ್ ಪೊಲೀಸರಿಂದ ವಿಚಾರಣಾಧೀನ ಖೈದಿಗಳಾಗಿದ್ದ ಸಿಮಿ ಸಂಘಟನೆಯ 7 ಮಂದಿ ಶಂಕಿತ ಉಗ್ರರು ಇಂದು ಮುಂಜಾನೆ ಮಧ್ಯ ಪ್ರದೇಶದ ಖಂಡ್ವಾ ಜೈಲಿನಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.
ಇಂದು ಮುಂಜಾನೆ ತಮ್ಮ ಜೈಲಿನ ಕೊಠಡಿಯ ಶೌಚಾಲಯದ ಗೋಡೆಯನ್ನು ಕೊರೆದು ಅಲ್ಲಿಂದ ಜೈಲು ಗೋಡೆಯನ್ನು ಹತ್ತಿ ಉಗ್ರರು ಪರಾರಿಯಾಗಿದ್ದಾರೆ. ಈ ವೇಳೆ ಪರಾರಿಯಾಗುತ್ತಿರುವ ಭಯೋತ್ಪಾದಕರನ್ನು ತಡೆಯಲು ಯತ್ನಿಸಿದ ಇಬ್ಬರು ಜೈಲು ಸಿಬ್ಬಂದಿಗಳಿಗೆ ಉಗ್ರರು ಚಾಕುವಿನಿಂದ ಇರಿದಿದ್ದು, ನಂತರ ಗೋಡೆ ಹತ್ತಿ ಪರಾರಿಯಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜೈಲು ಅಧೀಕ್ಷಕರು, ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಪೊಲೀಸ್ ಪೇದೆಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಪ್ರಸ್ತುತ ಜೈಲಿನಿಂದ ಪರಾರಿಯಾಗಿರುವ ಉಗ್ರರು ಪ್ರಮುಖ ಬಾಂಬ್ ಸ್ಫೋಟಗಳಲ್ಲಿ ಭಾಗಿಯಾಗಿದ್ದು, ಅತ್ಯಂತ ಅಪಾಯಕಾರಿ ಉಗ್ರರು ಎಂದು ತಿಳಿದು ಬಂದಿದೆ. ಹೀಗಾಗಿ ಖಂಡ್ವಾ ಸೇರಿದಂತೆ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ತಕ್ಷಣ ಕಾರ್ಯ ಪ್ರವೃತ್ತರಾಗಿರುವ ಪೊಲೀಸರು ಉಗ್ರರ ಬಂಧನಕ್ಕಾಗಿ ಬಲೆ ಬೀಸಿದ್ದು, ಈಗಾಗಲೇ ಪರಾರಿಯಾಗಿದ್ದ ಓರ್ವ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇನ್ನುಳಿದ 6 ಉಗ್ರರ ಬಂಧಿನಕ್ಕಾಗಿ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದು, ಜೈಲಿನಲ್ಲಿ ನಿರ್ಲಕ್ಷ್ಯವಹಿಸಿದ ಸಿಬ್ಬಂಧಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಧ್ಯಪ್ರದೇಶ ಗೃಹ ಸಚಿವ ಉಮಾಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಟ್ಟಾರೆ ಭಾರತ ಅತ್ಯಂತ ಸುಭದ್ರ ಜೈಲುಗಳಲ್ಲಿಯೇ ಖೈದಿಗಳ ಪರಾರಿಯಾಗುವ ಮೂಲಕ, ಜೈಲಿನ ಭದ್ರತೆಯ ಬಗ್ಗೆ ಅನುಮಾನ ಮೂಡುವಂತೆ ಮಾಡಿದ್ದಾರೆ.