ಗುಜರಾತ್: ಷರತ್ತು ಬದ್ಧ ಲೋಕಾ ಮಸೂದೆಗೆ ಅಂಗೀಕಾರ
ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಮಂಗಳವಾರ ಲೋಕಾಯುಕ್ತ ಮಸೂದೆಗೆ ಅಂಗೀಕಾರ ನೀಡಿದ್ದು, ಮಸೂದೆಗೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.
ಅಹಮದಾಬಾದ್: ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಮಂಗಳವಾರ ಲೋಕಾಯುಕ್ತ ಮಸೂದೆಗೆ ಅಂಗೀಕಾರ ನೀಡಿದ್ದು, ಮಸೂದೆಗೆ ಹಲವು ಷರತ್ತುಗಳನ್ನು ವಿಧಿಸಲಾಗಿದೆ.
ಹಲವು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಲೋಕಾಯುಕ್ತ ನೇಮಕಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ನೀಡಿರುವ ಗುಜರಾತ್ ಸರ್ಕಾರ ಮಸೂದೆಗೆ ಹಲವು ಷರತ್ತುಗಳನ್ನು ವಿಧಿಸಿದ್ದು, ಅಂಗೀಕಾರಕ್ಕಾಗಿ ರಾಜ್ಯಪಾಲ ಕಮ್ಲಾ ಬೇನೀವಾಲ್ ಅವರಿಗೆ ರವಾನಿಸಿದೆ.
ಮಸೂದೆ ಕರಡು ಪ್ರತಿ ರಚನೆಗಾಗಿ ಗುಜರಾತ್ ಸರ್ಕಾರ ನೇಮಿಸಿದ್ದ ಸಮಿತಿಯು ಈ ಷರತ್ತು ಬದ್ಧ ಲೋಕಾಯುಕ್ತ ಮಸೂದೆಯನ್ನು ರಚಿಸಿದ್ದು, ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸಮಿತಿ ಸೂಚಿಸುವ ವ್ಯಕ್ತಿಯನ್ನೇ ಲೋಕಾಯುಕ್ತರಾಗಿ ನೇಮಿಸಬೇಕು ಎಂದೂ, ಮೋದಿ ಬೇಡ ಎನ್ನುವ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಬಾರದೆಂಬ ಹಲವು ಅಸಂಬಂದ್ಧ ಷರತ್ತುಗಳನ್ನು ಸಮಿತಿ ವಿಧಿಸಿದೆ ಎಂದು ಮೂಲಗಳು ತಿಳಿಸಿವೆ.
ಒಟ್ಟಾರೆ ಗುಜರಾತ್ನಲ್ಲಿ ಲೋಕಾಯುಕ್ತ ನೇಮಕಕ್ಕೆ ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದ ಗುಜರಾತ್ ಸರ್ಕಾರ ಕೊನೆಗೂ ಲೋಕಾಯುಕ್ತ ನೇಮಕಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಿದೆ. ಅದೂ ಕೂಡ ಷರತ್ತು ಬದ್ಧ ಒಪ್ಪಿಗೆ ಎನ್ನುವುದು ಗಮನಾರ್ಹ ಸಂಗತಿಯಾಗಿದೆ. ಪ್ರಸ್ತುತ ಗುಜರಾತ್ ಸರ್ಕಾರ ಮಂಡಿಸಿರುವ ನೂತನ 'ಲೋಕಾಯುಕ್ತ ಆಯೋಗ್ ಬಿಲ್ 2013'ರಲ್ಲಿ ಲೋಕಾಯುಕ್ತರಿಗೆ ಪ್ರಾಪ್ತವಾಗುವ ಮೂಲಭೂತ ಅಧಿಕಾರಗಳನ್ನು ಮೊಟಕುಗೊಳಿಸಲಾಗಿದೆ.
ಈ ಹಿಂದೆ ಗುಜರಾತ್ನಲ್ಲಿ ಮಂಡಿಸಲಾಗಿದ್ದ ಲೋಕಾಯುಕ್ತ ಮಸೂದೆಯನ್ನು ಗುಜರಾತ್ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿತ್ತಾದರೂ, ತಿದ್ದುಪಡಿ ಮಾಡುವಂತೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಇದೀಗ ಮತ್ತೆ ಹೊಸ ತಿದ್ದುಪಡಿಗಳನ್ನು ಮಾಡಿರುವ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಹಲವು ಬದಲಾವಣೆಗಳನ್ನು ಮಾಡಿದೆ. ಮೋದಿ ನೇತೃತ್ವದ ಸಮಿತಿ ಸೂಚಿಸಿರುವ ಹೊಸ ತಿದ್ದುಪಡಿಗಳೆಂದರೆ-ಈ ಹಿಂದೆ ರಚಿಸಲಾಗಿದ್ದ ಮಸೂದೆಯಲ್ಲಿ ಲೋಕಾಯುಕ್ತರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯಪಾಲ ಮತ್ತು ಮುಖ್ಯ ನ್ಯಾಯಾಧೀಶರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದರು.
ಇದೀಗ ಸಮಿತಿ ರಚಿಸಿರುವ ನೂತನ ಮಸೂದೆಯಲ್ಲಿ ರಾಜ್ಯಪಾಲ ಮತ್ತು ಮುಖ್ಯ ನ್ಯಾಯಾಧೀಶರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ಲೋಕಾಯುಕ್ತ ಆಯ್ಕೆ ಪ್ರಕ್ರಿಯೆ ವೇಳೆ ನಡೆಸಲಾಗುವ ಸಮಾಲೋಚನೆಯಲ್ಲಿ ಮುಖ್ಯ ನ್ಯಾಯಾಧೀಶರ ಅಭಿಪ್ರಾಯ ಮುಖ್ಯವಾಗಿತ್ತು.
ಆದರೀಗ ನೂತನ ಮಸೂದೆಯಲ್ಲಿ ಮುಖ್ಯ ನ್ಯಾಯಾಧೀಶರನ್ನು ಈ ಪ್ರಕ್ರಿಯೆಯಿಂದ ಹೊರಗಿಟ್ಟು ಅವರ ಬದಲಿಗೆ ರಾಜ್ಯದ ಹೈಕೋರ್ಟ್ ನ್ಯಾಯಾಧೀಶರ ಅಭಿಪ್ರಾಯ ಪಡೆಯಬಹುದಾಗಿದೆ.
ಮತ್ತೊಂದು ಪ್ರಮುಖ ಅಂಶವೆಂದರೆ ಲೋಕಾಯುಕ್ತ ನೇಮಕ ವಿಚಾರದಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದ್ದು, ಸಮಿತಿ ಸೂಚಿಸವ ವ್ಯಕ್ತಿಗೆ ರಾಜ್ಯಪಾಲರು ಶಿಫಾರಸ್ಸು ಮಾಡಬೇಕಿದೆ ಅಥವಾ ರಾಷ್ಟ್ರಪತಿಗಳಿಗೆ ರವಾನಿಸಬಹುದಾಗಿದೆ.
ಅಲ್ಲದೆ ನೇಮಕವಾಗುವ ಲೋಕಾಯುಕ್ತರು ಸಾರ್ವಜನಿಕ ಹುದ್ದೆಯಲ್ಲಿರುವ ಅಧಿಕಾರಿ, ಶಾಸಕ ಅಥವಾ ಸಂಸದರ ವಿರುದ್ಧ ಚಾರ್ಜ್ ಶೀಟ್ ದಾಖಲಿಸುವ ಮುನ್ನ ಸಮಿತಿಯ ಅಭಿಪ್ರಾಯ ಸಂಗ್ರಹಿಸಬೇಕು ಎನ್ನುವ ಪ್ರಮುಖ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ.