ರಾಯ್‌ಬರೇಲಿ: ಸೋನಿಯಾ ನಾಮಪತ್ರ ಸಲ್ಲಿಕೆ
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ತಮ್ಮ ರಾಯ್‌ಬರೇಲಿ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದು, ಸೋನಿಯಾಗೆ ಅವರ ಪುತ್ರ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಥ್ ನೀಡಿದರು.
ರಾಯ್‌ಬರೇಲಿ: ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರು ತಮ್ಮ ರಾಯ್‌ಬರೇಲಿ ಕ್ಷೇತ್ರದಿಂದ ಬುಧವಾರ ನಾಮಪತ್ರ ಸಲ್ಲಿಸಿದ್ದು, ಸೋನಿಯಾಗೆ ಅವರ ಪುತ್ರ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಥ್ ನೀಡಿದರು.
ಇಂದು ನಾಮಪತ್ರ ಸಲ್ಲಿಸಲು ಆಗಮಿಸಿದ ಸೋನಿಯಾ ಗಾಂಧಿ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ದೊರೆಯಿತು. ಸೋನಿಯಾ ಗಾಂಧಿ ಅವರು ಕೂಡ ಭಾರಿ ಕಾರ್ಯಕರ್ತರ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಸುಮಾರು 1 ಗಂಟೆಗಳ ಕಾಲ ನಡೆದ ಮೆರವಣಿಯಲ್ಲಿ ಕಾರ್ಯಕರ್ತರು ಸೋನಿಯಾ ಗಾಂಧಿ ಅವರ ಮೇಲೆ ಹೂಮಳೆಗೈಯುತ್ತ ಅವರಿಗೆ ಸ್ವಾಗತ ನೀಡಿದರು.
ಸೋನಿಯಾ ಗಾಂಧಿ ಅವರು ನಾಮಪತ್ರ ಸಲ್ಲಿಸುವ ವೇಳೆ ಹಾಜರಿದ್ದ ಅವರ ಮಗ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಾರನ್ನು ಚಲಾಯಿಸಿಕೊಂಡು ಸೋನಿಯಾಗಾಂಧಿ ಅವರನ್ನು ಕರೆತಂದದ್ದು ವಿಶೇಷವಾಗಿತ್ತು.
ಪ್ರತಿಷ್ಠಿತ ರಾಯ್‌ಬರೇಲಿ ಕ್ಷೇತ್ರ ಗಾಂಧಿ ಕುಟುಂಬದ ಮೂಲ ಕ್ಷೇತ್ರ ಕೂಡ ಆಗಿದ್ದು, ಈ ಹಿಂದೆ ಸೋನಿಯಾ ಗಾಂಧಿ ಅವರ ಅತ್ತೆ ಇಂದಿರಾಗಾಂಧಿ ಅವರು ಸಹ ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2004ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸೋನಿಯಾ ಗಾಂಧಿ ಈಗ ಮೂರನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕಳೆದ ಬಾರಿಗಿಂತಲೂ ಈ ಬಾರಿ ಸೋನಿಯಾ ಗಾಂಧಿ ಅವರಿಗೆ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದ್ದು, ಈ ಬಾರಿ ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇ ಬೇಕೆಂದು ಹವಣಿಸುತ್ತಿರುವ ಬಿಜೆಪಿ ರಾಯ್‌ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ವಿರುದ್ಧ ಅಜಯ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಿದೆ.