ಹಿಂದೂ ಮಹಾಸಾಗರದಲ್ಲಿ ಮಲೇಷ್ಯಾ ವಿಮಾನದ ಸಿಗ್ನಲ್ ಪತ್ತೆ?
ಚೀನಾಗೆ ಸೇರಿದ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನದ ಸಿಗ್ನಲ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಬೀಜಿಂಗ್: ಚೀನಾಗೆ ಸೇರಿದ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ನಾಪತ್ತೆಯಾಗಿದ್ದ ಮಲೇಷ್ಯಾ ವಿಮಾನದ ಸಿಗ್ನಲ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
ಕಳೆದ ಮಾರ್ಚ್ 8ರಂದು ನಾಪತ್ತೆಯಾಗಿದ್ದ ಮಲೇಷ್ಯಾ ಏರ್‌ಲೈನ್ಸ್ ವಿಮಾನದ ಪತ್ತೆಗಾಗಿ ಚೀನಾದಿಂದ ನಿಯೋಜನೆಗೊಂಡಿದ್ದ ಹೈಕ್ಸುನ್ 01 ಎಂಬ ಸೇನಾ ಹಡಗಿಗೆ ವಿಮಾನದ ಸಿಗ್ನಲ್‌ಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಆದರೆ ಪ್ರಸ್ತುತ ಪತ್ತೆಯಾಗಿರುವ ಸಿಗ್ನಲ್‌ಗಳು ನಾಪತ್ತೆಯಾದ ವಿಮಾನವನ್ನು ಪತ್ತೆ ಮಾಡುವಲ್ಲಿ ಸಹಕಾರಿಯಾಗುತ್ತವೆ ಎಂಬುದರ ಕುರಿತು ಶಂಕೆ ಮೂಡಿದೆ.
ಪ್ರಸ್ತುತ ವಿಮಾನದ ಸಿಗ್ನಲ್ ಪತ್ತೆ ಕುರಿತು ಚೀನಾ ಸರ್ಕಾರವಾಗಲಿ ಅಥವಾ ಮಲೇಷ್ಯಾ ಸರ್ಕಾರವಾಗಲೀ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಆದರೆ ಸ್ಥಳೀಯ ಮಾಧ್ಯಮಗಳು ಮತ್ತು ಸುದ್ದಿ ಸಂಸ್ಥೆಗಳು ಈ ಬಗ್ಗೆ ಸುದ್ದಿ ಬಿತ್ತರಿಸಿವೆ. ಈ ಹಿಂದೆ ದಕ್ಷಿಣ ಆಸ್ಟ್ರೇಲಿಯಾ ಸೇರಿದಂತೆ ಪ್ರಸ್ತುತ ಸಿಗ್ನಲ್ ಪತ್ತೆಯಾಗಿರುವ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಮಲೇಷ್ಯಾ ವಿಮಾನ ದುರಂತಕ್ಕೀಡಾಗಿರಬಹುದು ಎಂದು ಮಲೇಷ್ಯಾ ಸರ್ಕಾರ ಶಂಕೆ ವ್ಯಕ್ತಪಡಿಸಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಸಾಕ್ಷಾಧಾರಗಳು ಅಥವಾ ವಿಮಾನದ ಅವಶೇಷಗಳು ಪತ್ತೆಯಾಗಿರಲಿಲ್ಲ.
ಕಳೆದ ಮಾರ್ಚ್ 8ರಂದು ಮಲೇಷ್ಯಾದ ಕೌಲಾಲಂಪುರದಿಂದ ಬೀಜಿಂಗ್‌ನತ್ತ ಪ್ರಯಾಣ ಬೆಳೆಸಿದ್ದ ಮಲೇಷ್ಯಾ ಏರ್‌ಲೈನ್ಸ್‌ಗೆ ಸೇರಿದ ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು. ಅಂದಿನಿಂದ ಸುಮಾರು 27 ರಾಷ್ಟ್ರಗಳು ವಿಮಾನ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಯಾವುದೇ ಅವಶೇಷವಾಗಲಿ ಅಥವಾ ವಿಮಾನದ ಕುರಿತ ಸುಳುಹುಗಳಾಗಲಿ ದೊರೆತಿಲ್ಲ. ಈ ಹಿಂದೆ ಕಳೆದ ಮಾರ್ಚ್‌ನಲ್ಲಿ ಮಲೇಷ್ಯಾ ಸರ್ಕಾರ ನಾಪತ್ತೆ ವಿಮಾನ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪತನವಾಗಿರಬಹುದು ಎಂದು ಅಧಿಕೃತ ಹೇಳಿಕೆ ನೀಡಿತ್ತು. ಆಲ್ಲದೆ ಸಾವಿಗೀಡಾದ ಪ್ರತಿಯೊಬ್ಬ ಪ್ರಯಾಣಿಕರಿಗೂ ಪರಿಹಾರ ಧನ ಘೋಷಿಸಿತ್ತು.