ಪ್ರಣಾಳಿಕೆ ಎಲ್ಲಿ: ಬಿಜೆಪಿಗೆ ರಾಹುಲ್ ಪ್ರಶ್ನೆ
ಚುನಾವಣೆ ಹತ್ತಿರವಾಗುತ್ತಿದ್ದರೂ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲವೇಕೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ನವದೆಹಲಿ: ಚುನಾವಣೆ ಹತ್ತಿರವಾಗುತ್ತಿದ್ದರೂ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿಲ್ಲವೇಕೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಪ್ರಶ್ನಿಸಿದ್ದಾರೆ.
ಇಂದು ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಇನ್ನೇನು 2 ದಿನಗಳಲ್ಲಿ ಚುನಾವಣೆ ಆರಂಭಗೊಳ್ಳಲಿದೆ. ಆದರೂ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿಲ್ಲ. ತನ್ನ ಪ್ರಣಾಳಿಕೆಯನ್ನೇ ಸಿದ್ಧ ಮಾಡಲಾಗದ ಬಿಜೆಪಿ ದೇಶ ಆಳುವ ಕನಸು ಕಾಣುತ್ತಿದೆ. 2004ರಲ್ಲಿ ಬಿಜೆಪಿ ಭಾರತ ಪ್ರಕಾಶಿಸುತ್ತಿದೆ ಎಂಬ ಬಲೂನ್ ಅನ್ನು ಆರಂಭಿಸಿತ್ತು. ಆದರೆ ಅದು ಚುನಾವಣಾ ಫಲಿತಾಂಶದ ನಂತರ ಸ್ಪೋಟಗೊಂಡು ಚಿದ್ರವಾಗಿತ್ತು. 2009ರಲ್ಲಿಯೇ ಇದೇ ಪುನರಾವರ್ತನೆಗೊಂಡಿತ್ತು.
ಪ್ರಸಕ್ತ ಚುನಾವಣೆಯಲ್ಲಿಯೂ ಬಿಜೆಪಿಗೆ ಹಳೆಯ ಫಲಿತಾಂಶವೇ ಲಭಿಸಲಿದೆ. ದೇಶದ ಬೇರಾವ ರಾಜ್ಯಗಳಿಗೂ ಗುಜರಾತ್ ಮಾದರಿ ಬೇಡ. ಗುಜರಾತ್ ನಂತರದ ಸ್ಥಾನದಲ್ಲಿ ಬಿಜೆಪಿಗೆ ಗುರಿಯಾಗಿ ಹರ್ಯಾಣ ರಾಜ್ಯವನ್ನು ಆರಿಸಿಕೊಂಡಿದೆ. ಆದರೆ ಹರ್ಯಾಣ ಮತ್ತೊಂದು ಗುಜರಾತ್ ಆಗುವುದು ಬೇಡ. ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಟೊಳ್ಳು ಟೊಳ್ಳು ಭಾಷಣಗಳನ್ನು ಮಾಡುತ್ತಿದೆ. ಆದರೆ ಸತ್ಯಾಂಶವೆಂದರೆ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿರುವ ರಾಜ್ಯಗಳಲ್ಲಿ ಭ್ರಷ್ಟಾಚಾರವನ್ನು ನಿಯಂತ್ರಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಒಟ್ಟಾರೆ ಇಂದು ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಣಾಳಿಕೆ ವಿಚಾರವನ್ನು ಗುರಿಯಾಗಿಸಿಕೊಂಡ ರಾಹುಲ್ ಗಾಂಧಿ ಅವರು ತೀವ್ರ ವಾಗ್ದಾಳಿ ನಡೆಸಿದರು.