ರಾಹುಲ್ ಅಮೇಥಿಗೆ ಸವಾಲು, ನನಗಲ್ಲ: ಸ್ಮೃತಿ ಇರಾನಿ
ರಾಹುಲ್ ಗಾಂಧಿ ತಮಗಲ್ಲ, ಅಮೇಥಿಗೆ ಸವಾಲಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ..
ಅಮೇಥಿ(ಉ.ಪ್ರದೇಶ): ರಾಹುಲ್ ಗಾಂಧಿ ತಮಗಲ್ಲ, ಅಮೇಥಿಗೆ ಸವಾಲಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಸೋಮವಾರ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ತಮ್ಮ ಅಮೇಥಿ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿರುವ ಸ್ಮೃತಿ ಇರಾನಿ ಅವರು, ಬಿಜೆಪಿ ಮಹಿಳಾ ಕಾರ್ಯಕರ್ತರೊಂದಿಗೆ ಸೇರಿ ಪ್ರಚಾರ ನಡೆಸಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ರಾಹುಲ್ ಗಾಂಧಿ ಅವರನ್ನು ನಾನು ನನ್ನ ಪ್ರತಿಸ್ಪರ್ಧಿ ಅಥವಾ ಸವಾಲು ಎಂದು ಪರಿಗಣಿಸಿಲ್ಲ. ಸ್ವತಃ ರಾಹುಲ್ ಗಾಂಧಿ ಅವರೇ ಅಮೇಥಿ ಕ್ಷೇತ್ರಕ್ಕೆ ಸವಾಲಾಗಿದ್ದಾರೆ ಎಂದು ಪರೋಕ್ಷವಾಗಿ ವ್ಯಂಗ್ಯ ಮಾಡಿದರು.
ತಮ್ಮ ಮತ್ತೋರ್ವ ಪ್ರತಿಸ್ಪರ್ಧಿ ಆಮ್ ಆದ್ಮಿ ಪಕ್ಷದ ಕುಮಾರ್ ವಿಶ್ವಾಸ್ ಅವರ ಕುರಿತು ನಿನ್ನೆ ಮಾತನಾಡಿದ್ದ ಸ್ಮೃತಿ ಇರಾನಿ ಅವರು, ನಾನು ಕೇವಲ ಕಾಂಗ್ರೆಸ್ ಪಕ್ಷವನ್ನು ಮಾತ್ರ ನನ್ನ ಪ್ರತಿಸ್ಪರ್ಧಿಯಾಗಿ ಪರಿಗಣಿಸುತ್ತೇನೆ. ಕಾಂಗ್ರೆಸ್ ಬಿ ಪಕ್ಷವನ್ನಲ್ಲ. ದೆಹಲಿಯಲ್ಲಿ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚಿಸಿದ ಆಪ್ ಪಕ್ಷ ಕೂಡ ಕಾಂಗ್ರೆಸ್ ಎಂದೇ ನಾನು ಪರಿಗಣಿಸಿದ್ದೇನೆ ಎಂದು ಅವರು ಹೇಳಿದ್ದರು.
ದೇಶದ ಪ್ರಮುಖ ಜಿದ್ದಾಜಿದ್ದಿನ ಕ್ಷೇತ್ರಗಳಲ್ಲಿ ಒಂದಾಗಿರುವ ಅಮೇಥಿಯಲ್ಲಿ ಸ್ಪರ್ಧಿಸಲು ಸ್ಮೃತಿ ಇರಾನಿ ಅವರು ಆರಂಭದಲ್ಲಿ ನಕಾರಾ ವ್ಯಕ್ತಪಡಿಸಿದರಾದರೂ, ನಂತರ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದ ಅವರು ಸ್ಪರ್ಧೆಗಿಳಿದಿದ್ದಾರೆ. ಹಿಂದಿ ಧಾರಾವಾಹಿಯ ಮೂಲಕವಾಗಿ ಖ್ಯಾತಿಗಳಿಸಿದ ಸ್ಮೃತಿ ಇರಾನಿ ಅವರು, 2009ರಿಂದ ಅಮೇಥಿಯನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪ್ರಬಲ ಸ್ಪರ್ಧೆ ಒಡ್ಡಲಿದ್ದಾರೆ ಎಂಬುದು ಚುನಾವಣೆ ಬಳಿಕ ತಿಳಿಯಲಿದೆ.