'ಲೋಕ ಸಮರ'ದಿಂದ ಸರ್ಕಾರದ ಮೇಲೆ ಪರಿಣಾಮ: ನಿತೀಶ್
ಪ್ರಸಕ್ತ ಲೋಕಸಭಾ ಚುನಾವಣೆ ತಮ್ಮ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಒಪ್ಪಿಕೊಂಡಿದ್ದಾರೆ.
ಪಾಟ್ನಾ: ಪ್ರಸಕ್ತ ಲೋಕಸಭಾ ಚುನಾವಣೆ ತಮ್ಮ ಸರ್ಕಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಒಪ್ಪಿಕೊಂಡಿದ್ದಾರೆ.
ಪಾಟ್ನಾದಲ್ಲಿ ನಡೆದ ಪಕ್ಷ ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್ ಕುಮಾರ್ ಅವರು, ಪ್ರಸಕ್ತ ಲೋಕಸಭಾ ಚುನಾವಣೆ ಬಿಹಾರ ರಾಜ್ಯಕ್ಕೆ ಮತ್ತು ತಮಗೆ ಪ್ರಮುಖವಾಗಿದ್ದು, ಚುನಾವಣಾ ಫಲಿತಾಂಶವು ರಾಜ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ್ದಾರೆ. ಅಂತೆಯೇ ತಾವು ಪ್ರಸಕ್ತ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟ(ಯುಪಿಎ ಮತ್ತು ಎನ್‌ಡಿಎ)ಕ್ಕೆ ಬೆಂಬಲ ನೀಡುವುದಿಲ್ಲ ಎಂದು ಅವರು
ಸ್ಪಷ್ಟಪಡಿಸಿದ್ದಾರೆ.
2010ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸೇರಿ ಜೆಡಿಯು ಸರ್ಕಾರ ರಚಿಸಿತ್ತು. 243 ಸ್ಥಾನಗಳನ್ನು ಹೊಂದಿರುವ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 115 ಮತ್ತು ಬಿಜೆಪಿ 91 ಸ್ಥಾನಗಳನ್ನು ಗಳಿಸಿದ್ದವು. ಅನಂತರ ಬಿಜೆಪಿ ತನ್ನ ಪ್ರಧಾನಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನು ಘೋಷಿಸುತ್ತಿದ್ದಂತೆಯೇ ಜೆಡಿಯು ಅಸಮಾಧಾನಗೊಂಡು ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿತು. ಆ ಮೂಲಕ ಬಿಹಾರ ಸರ್ಕಾರ ಅಲ್ಪ ಮತಕ್ಕೆ ಕುಸಿದಿತ್ತು.
ಕಳೆದ ಜೂನ್ 19ರಂದು ವಿಶ್ವಾಸ ಮತ ಯಾಚನೆ ವೇಳೆ ಜೆಡಿಯು ಸರ್ಕಾರ ಆರ್‌ಜೆಡಿ ಮತ್ತು ಎಲ್‌ಜೆಪಿ ಪಕ್ಷಗಳನ್ನು ಓಲೈಸಿಕೊಂಡು ಬಹುಮತ ಸಾಬೀತು ಪಡಿಸಿತ್ತು. ಆದರೆ ಪ್ರಸಕ್ತ ಲೋಕಸಭಾ ಚುನಾವಣೆಯ ನಂತರ ಬಿಹಾರ ಸರ್ಕಾರದ ಭವಿಷ್ಯದ ಮೇಲೆ ಕತ್ತಲೆ ಸರಿಯುವ ಸಾಧ್ಯತೆ ಇದೆ. ಒಂದು ವೇಳೆ ಕೇಂದ್ರದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಬಿಹಾರದಲ್ಲಿ ಪಕ್ಷವನ್ನು ಪ್ರಬಲಗೊಳಿಸುವ ಸಾಧ್ಯತೆ ಇದೆ. ಇದರಿಂದ ತಮ್ಮ ಅಧಿಕಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ನಿತೀಶ್ ಕುಮಾರ್ ಚಿಂತಿಸಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.