ನಟ ಪವನ್ ಮನೆಗೆ ಚಂದ್ರಬಾಬು ನಾಯ್ಡು ಭೇಟಿ
ಖ್ಯಾತ ತೆಲುಗು ನಟ ಪವನ್ ಕಲ್ಯಾಣ್ ಮನೆಗೆ ಟಿಡಿಪಿ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು..
ಹೈದರಾಬಾದ್: ಖ್ಯಾತ ತೆಲುಗು ನಟ ಪವನ್ ಕಲ್ಯಾಣ್ ಅವರ ಮನೆಗೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಭೇಟಿ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಕೋರಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಜನಸೇನಾ ಪಕ್ಷ ಸ್ಥಾಪಿಸಿದ್ದ ಪವನ್ ಕಲ್ಯಾಣ್ ಅವರು ಬಿಜೆಪಿಗೆ ತಮ್ಮ ಬೆಂಬಲ ಘೋಷಸಿದ್ದರು. ಅಲ್ಲದೆ 2 ಸುತ್ತಿನ ಪ್ರಚಾರ ಕಾರ್ಯವನ್ನು ಮಾಡಿದ್ದರು. ಇದೀಗ ತೆಲುಗು ದೇಶಂ ಪಕ್ಷದ ಪರವಾಗಿಯೂ ಕೂಡ ಪ್ರಚಾರ ನಡೆಸುವಂತೆ ಚಂದ್ರಬಾಬು ನಾಯ್ಡು ಅವರು ಮನವಿ ಮಾಡಿದ್ದಾರೆ. ಆಂಧ್ರ ಪ್ರದೇಶದ ಪ್ರಮುಖ ಪಕ್ಷಗಳಲ್ಲಿ ಒಂದಾದ ತೆಲುಗು ದೇಶಂ ಪಕ್ಷ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಇದೇ ಕಾರಣಕ್ಕಾಗಿ ಬಿಜೆಪಿ ಪರವಾಗಿ ಪ್ರಚಾರ ನಡೆಸುತ್ತಿರುವ ಪವನ್ ಕಲ್ಯಾಣ್ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿಯೂ ಪ್ರಚಾರ ನಡೆಸಬೇಕು ಎಂದು ಚಂದ್ರಬಾಬು ನಾಯ್ಡು ಅವರು ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಚಂದ್ರಬಾಬು ನಾಯ್ಡು ಅವರ ಪ್ರಸ್ತಾಪಕ್ಕೆ ಪವನ್ ಕಲ್ಯಾಣ್ ಅವರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದು, ಮುಂದಿನ ದಿನಗಳಲ್ಲಿ ತೆಲುಗು ದೇಶಂ ಪಕ್ಷದ ಪರವಾಗಿ ಪ್ರಚಾರ ನಡೆಸುವ ಸಾಧ್ಯತೆ ಇದೆ.
ಜೂನಿಯರ್ ಎನ್‌ಟಿಆರ್ ಬೆಂಬಲಿಗರ ವಿರೋಧ
ಇದೇ ವೇಳೆ ಪವನ್ ಕಲ್ಯಾಣ್ ಅವರ ಬೆಂಬಲ ಯಾಚಿಸಿರುವ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರ ನಡೆಗೆ ನಟ ಜೂನಿಯರ್ ಎನ್ ಟಿ ಆರ್ ಅವರ ಬೆಂಬಲಿಗರು ವಿರೋಧಿಸಿದ್ದಾರೆ. ಪಕ್ಷದಲ್ಲಿಯೇ ಬಾಲಕೃಷ್ಣ, ಜೂನಿಯರ್ ಎನ್‌ಟಿ ಆರ್ ರಂತಹ ಸ್ಟಾರ್ ಪ್ರಚಾರಕರಿರುವಾಗ ಪವನ್ ಕಲ್ಯಾಣ್‌ರ ಬೆಂಬಲ ಕೋರಿರುವುದು ಮುಜುಗರ ಉಂಟುಮಾಡಿದೆ ಎಂದು ಬೆಂಬಲಿಗರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹೊಸ ಪಕ್ಷ ಸ್ಥಾಪಿಸಿರುವ ನಟ ಪವನ್ ಕಲ್ಯಾಣ್ ಆಂಧ್ರ ಪ್ರದೇಶ ರಾಜಕೀಯದಲ್ಲಿ ಹೊಸ ಅಲೆ ಎಬ್ಬಿಸಿದ್ದು, ರಾಜಕೀಯ ಪಕ್ಷಗಳ ಕೇಂದ್ರ ಬಿಂದುವಾಗಿದ್ದಾರೆ. ನಿನ್ನೆ ತೆಲಂಗಾಣ ಭಾಗದಲ್ಲಿ ಬಿಜೆಪಿ ಮತ್ತು ತೆಲುಗು ದೇಶಂ ಪಕ್ಷಗಳು ಜಂಟಿಯಾಗಿ ನಡೆಸಿದ ಪ್ರಚಾರ ಸಮಾವೇಶಗಳು ಕೂಡ ಇದಕ್ಕೆ ಸಾಕ್ಷಿಯಾಗಿದ್ದು, ಸಮಾವೇಶದುದ್ದಕ್ಕೂ ಪವನ್ ಗುಣಗಾನ ಮಾಡಿದ ಮೋದಿ, ಚಂದ್ರಬಾಬು ನಾಯ್ಡು ಅವರ ಕುರಿತು ಒಂದು ಮಾತೂ ಆಡಲಿಲ್ಲ.