'ಮುಸ್ಲಿಮರು ಕೋಮುವಾದಿ ಗಳಾಗಬೇಕು'
ಮುಸ್ಲಿಮರು ಕೋಮುವಾದಿ ಗಳಾಗಬೇಕು ಎಂದು ಘಾಜಿಯಾಬಾದ್ ಆಪ್ ಅಭ್ಯರ್ಥಿ
ಮುಂಬೈ: ತಮ್ಮ ಅಭಿವೃದ್ಧಿ ಮತ್ತು ಏಳಿಗೆಗಾಗಿ ಮುಸ್ಲಿಮರು ಕೋಮುವಾದಿಗಳಾಗಬೇಕು ಎಂದು ಆಮ್ ಆದ್ಮಿ ಪಕ್ಷದ ಮುಖಂಡೆ ಮತ್ತು ಘಾಜಿಯಾಬಾದ್ ಆಪ್ ಅಭ್ಯರ್ಥಿ ಶಾಜಿಯಾ ಇಲ್ಮಿ ಅವರು ಹೇಳಿದ್ದಾರೆ.
ನಿನ್ನೆ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಜಿಯಾ ಅವರು, 'ಮುಸ್ಲಿಮರು ಜಾತ್ಯಾತೀತರಾಗಿದ್ದು, ಅವರು ಕೋಮುವಾದಿಗಳಾಗಬೇಕಿದೆ. ಓರ್ವ ಮುಸ್ಲಿಂ ಜಾತ್ಯಾತೀತನಾಗಿದ್ದರೆ, ತನ್ನ ಮತವೇ ಆತನ ಪಾಲಿಗಿರುವುದಿಲ್ಲ. ಅರವಿಂದ್ ಕೇಜ್ರಿವಾಲ್ ಅವರು ತಮ್ಮೊಳಗಿನವರಲ್ಲಿ ಒಬ್ಬರಾಗಿದ್ದು, ಅವರಿಗೆ ಮತ ನೀಡಬೇಕು ಎಂದು ಹೇಳಿದ್ದ ದೃಶ್ಯಾವಳಿಗಳು ಅಂತರ್ಜಾಲದಲ್ಲಿ ಹರಿದಾಡಿತ್ತು. ಆಪ್ ಮುಖಂಡೆ ಶಾಜಿಯಾ ಅವರ ಹೇಳಿಕೆ ಕುರಿತು ಇದೀಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದು, ಶಾಜಿಯಾ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡುವ ಕುರಿತು ಬಿಜೆಪಿ ಚಿಂತನೆ ನಡೆಸುತ್ತಿದೆ.
ಅಲ್ಲದೆ ಕಾಂಗ್ರೆಸ್ ಪಕ್ಷ ಕೂಡ ಶಾಜಿಯಾ ಅವರ ಹೇಳಿಕೆಯನ್ನು ಖಂಡಿಸಿದ್ದು, ಇದೊಂದು ಬಾಲಿಶ ಹೇಳಿಕೆ ಎಂದು ಕಿಡಿಕಾರಿದೆ. ಅಲ್ಲದೆ ಸ್ವತಃ ಆಮ್ ಆದ್ಮಿ ಪಕ್ಷ ಕೂಡ ಶಾಜಿಯಾ ಅವರ ಹೇಳಿಕೆಯನ್ನು ಪರೋಕ್ಷ ಖಂಡಿಸಿದ್ದು, ಆಮ್ ಆದ್ಮಿ ಪಕ್ಷ ಕೋಮುವಾದ ರಾಜಕೀಯದಲ್ಲಿ ಭರವಸೆ ಇಟ್ಟಿಲ್ಲ. ಇಂತಹ ಬೆಳವಣಿಗೆಯನ್ನು ನಾವು ಬೆಳೆಯಲು ಬಿಡುವುದಿಲ್ಲ ಎಂದು ತನ್ನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದೆ.
ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದ ಶಾಜಿಯಾ
ತಮ್ಮ ಹೇಳಿಕೆ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಲೇ ಯೂಟರ್ನ್ ಹೊಡೆದಿರುವ ಶಾಜಿಯಾ ಇಲ್ಮಿ ಅವರು, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ಹೇಳಿದ್ದಾರೆ. ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ನಾನು ಆ ರೀತಿ ಹೇಳಿಕೆ ನೀಡಿಲ್ಲ. ಮುಸ್ಲಿಮರು ತೀರಾ ಜಾತ್ಯಾತೀತರಾಗಿದ್ದು, ಕನಿಷ್ಟ ಪ್ರಸಕ್ತ ಚುನಾವಣೆಯಲ್ಲಾದರೂ ಅವರು ಸ್ವಾರ್ಥಿಗಳಾಗಬೇಕಿದೆ. ಇಲ್ಲವಾದಲ್ಲಿ ಕಾಂಗ್ರೆಸ್ ನಂತಹ ಪಕ್ಷಗಳು ಮುಸ್ಲಿಮರನ್ನು ತಮ್ಮ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿರುತ್ತಾರೆ ಎಂದು ಹೇಳಿದ್ದೆ. ಆದರೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದು ಶಾಜಿಯಾ ಆಲವತ್ತುಕೊಂಡಿದ್ದಾರೆ.