ಪತಿ ಹುಡುಕಿಕೊಡಿ ಎಂದ ಪತ್ನಿಗೆ 1 ಲಕ್ಷ ದಂಡ..!
ನಾಪತ್ತೆಯಾಗಿರುವ ತನ್ನ ಪತಿಯನ್ನು ಹುಡುಕಿಕೊಂಡಿ ಎಂದ ಪತ್ನಿಗೆ ನ್ಯಾಯಾಲಯ 1 ಲಕ್ಷ ದಂಡ ವಿಧಿಸಿದೆ..
ಬೆಂಗಳೂರು: ನಾಪತ್ತೆಯಾಗಿರುವ ತನ್ನ ಪತಿಯನ್ನು ಹುಡುಕಿಕೊಂಡಿ ಎಂದ ಪತ್ನಿಗೆ ನ್ಯಾಯಾಲಯ 1 ಲಕ್ಷ ದಂಡ ವಿಧಿಸಿದೆ.
ಆಶ್ಚರ್ಯವಾದರೂ ಇದು ಸತ್ಯ. ಬೆಂಗಳೂರಿನ ಸುದ್ದಗುಂಟೆ ಪಾಳ್ಯದ ನಿವಾಸಿ ಉಷಾರಾಣಿ ಎಂಬುವವರು ಕಳೆದ ಕೆಲವು ದಿನಗಳಿಂದ ತನ್ನ ಪತಿ ಮುನಿರಾಜು ಮನೆಗೆ ಬಂದಿಲ್ಲ. ನಾಪತ್ತೆಯಾಗಿರುವ ತನ್ನ ಪತಿಯನ್ನು ಹುಡುಕಿಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ನಾಪತ್ತೆಯಾದ ಉಷಾರಾಣಿ ಅವರ ಪತಿಯನ್ನು ಹುಡುಕಿಕೊಡುವಂತೆ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿತು.
ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಮೈಕೋ ಲೇಔಟ್ ಪೊಲೀಸರು, ಆರಂಭದಲ್ಲಿ ಉಷಾರಾಣಿ ಅವರು ನೀಡಿದ ಮಾಹಿತಿಯ ಮೇರೆಗೆ ತನಿಖೆ ನಡೆಸಿದರು. ಆದರೂ ಪೊಲೀಸರಿಗೆ ಮುನಿರಾಜು ನಾಪತ್ತೆ ಪ್ರಕರಣದ ಹಿಂದೆ ಪತ್ನಿ ಉಷಾರಾಣಿ ಅವರ ಕೈವಾಡವಿರಬಹುದು ಎಂಬ ಶಂಕೆ ಮೂಡಿತ್ತು. ಹೀಗಾಗಿ ಇದೇ ದಿಕ್ಕಿನಲ್ಲಿ ಪೊಲೀಸರು ತನಿಖೆ ಕೈಗೊಂಡರು. ಇದಕ್ಕಾಗಿ ಈಗಾಗಲೇ ಪತ್ತೆಯಾಗಿದ್ದ ಅನಾಥ ಶವಗಳ ಮಾಹಿತಿ ಪಡೆದರು. ಈ ನಡುವೆ ಬೆಂಗಳೂರಿನ ಹೊಸಕೋಟೆ ಬಳಿ ಗುರುತು ತಿಳಿಯದ ಶವವೊಂದು ಪತ್ತೆಯಾಗಿತ್ತು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪೊಲೀಸರು ಈ ಪ್ರಕರಣವನ್ನು ಕೈಬಿಟ್ಟಿದ್ದರು.
ಈ ನಡುವೆ ಮೈಕೋ ಲೇಔಟ್ ಪೊಲೀಸರು ನಡೆಸಿದ ತನಿಖೆಯಲ್ಲಿ ಹೊಸಕೋಟೆ ಬಳಿ ಪತ್ತೆಯಾದ ಅನಾಥ ಶವ ನಾಪತ್ತೆಯಾಗಿದ್ದ ಮುನಿರಾಜುವಿನದ್ದೇ ಆಗಿತ್ತು ಎಂಬುದು ಖಾತರಿಯಾಗಿತ್ತು. ಮುನಿರಾಜು ಪತ್ನಿ ಉಷಾರಾಣಿಯನ್ನು ವಶಕ್ಕೆ ಪಡೆದ ಪೊಲೀಸರು ತಮ್ಮ ಪೊಲೀಸ್ ಭಾಷೆಯಲ್ಲಿ ವಿಚಾರಿಸಿದಾಗ, ತನ್ನ ಪತಿಯನ್ನು ತಾನೇ ಕೊಂದಿರುವ ವಿಚಾರವನ್ನು ಹೇಳುತ್ತಾಳೆ. ಅಲ್ಲದೆ ತನ್ನ ಈ ಕಾರ್ಯಕ್ಕೆ ಮಹೇಶ್ ಮತ್ತು ಸುರೇಶ್ ಎಂಬ ಯುವಕರ ಸಹಾಯ ಪಡೆದಿರುವ ಕುರಿತು ಮಾಹಿತಿ ನೀಡುತ್ತಾಳೆ.
ಮಹೇಶ್ ಮತ್ತು ಸುರೇಶ್ರೊಂದಿಗೆ ಸೇರಿ ತನ್ನ ಪತಿ ಮುನಿರಾಜುವನ್ನು ಉಸಿರುಗಟ್ಟಿಸಿಕೊಂದು ಹೊಸಕೊಟೆ ಬಳಿ ಬಿಸಾಡುತ್ತಾಳೆ. ನಂತರ ಯಾರಿಗೂ ಅನುಮಾನ ಬಾರದಿರಲೆಂದು ತನ್ನ ಪತಿ ನಾಪತ್ತೆಯಾಗಿದ್ದಾರೆಂದು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸುತ್ತಾಳೆ. ಪೊಲೀಸರ ತನಿಖೆಯಿಂದಾಗಿ ಉಷಾರಾಣಿಯ ಮಾಸ್ಟರ್ ಪ್ಲಾನ್ ಬಹಿರಂಗಗೊಂಡಿದೆ.
ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ ಉಷಾರಾಣಿಗೆ ಹೈಕೋರ್ಟ್ ವಿಭಾಗೀಯ ಪೀಠ 1 ಲಕ್ಷ ದಂಡ ವಿಧಿಸಿದ್ದು, ಉಷಾರಾಣಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಉಷಾರಾಣಿ ಮತ್ತು ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದು. ತನಿಖೆ ಮುಂದುವರೆಸಿದ್ದಾರೆ.