ರಸ್ತೆ ಅಪಘಾತ: ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿ ಸಾವು
ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ..
ಹೈದರಾಬಾದ್: ಕಳೆದ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆಂಧ್ರ ಪ್ರದೇಶದ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶೋಭಾ ನಾಗಿರೆಡ್ಡಿ ಸಾವಿಗೀಡಾಗಿದ್ದಾರೆ.
ಕರ್ನೂಲ್ ಜಿಲ್ಲೆಯ ಅಲ್ಲಗಡ್ಡ ಲೋಕಸಭಾ ಕ್ಷೇತ್ರದ ವೈಎಸ್‌ಆರ್ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಶೋಭಾ ನಾಗಿರೆಡ್ಡಿ ಅವರು ನಿನ್ನೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಮುಗಿಸಿ ಹೈದರಾಬಾದ್‌ಗೆ ವಾಪಸಾಗುತ್ತಿದ್ದರು. ಕರ್ನೂಲ್-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಕಾರು ಚಾಲಕನ ನಿಯಂತ್ರಣ ತಪ್ಪಿದ್ದು, ಈ ವೇಳೆ ಶೋಭಾ ಅವರು ಕಾರಿನಿಂದ ಹೊರಬಿದ್ದಿದ್ದಾರೆ.
ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಹೈದರಾಬಾದ್ ಖಾಸಗಿ ಅಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಶೋಭಾ ಅವರ ತಲೆಗೆ ತೀವ್ರ ಪೆಟ್ಟಾಗಿದ್ದು, ಹೆಚ್ಚಿನ ರಕ್ತಸ್ರಾವದಿಂದಾಗಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶೋಭಾ ನಾಗಿರೆಡ್ಡಿ ಅವರ ಮರಣದ ವಿಚಾರ ತಿಳಿಯುತ್ತಿದ್ದಂತೆಯೇ ವೈಎಸ್‌ಆರ್ ಕಾಂಗ್ರೆಸ್ ಸಂಸ್ಥಾಪಕ ಮತ್ತು ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರು, ಶೋಭಾ ಅವರ ಮನೆಗೆ ಧಾವಿಸಿದ್ದಾರೆ.
1996ರಲ್ಲಿ ಪ್ರಥಮ ಬಾರಿಗೆ ಸಂಸದೆಯಾಗಿದ್ದ ಶೋಭಾ ಅವರು, ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದರು. ಈ ಹಿಂದೆ ತೆಲುಗು ದೇಶಂ ಮತ್ತು ಪ್ರಜಾರಾಜ್ಯಂ ಪಕ್ಷಗಳಿಂದ ಪ್ರತಿನಿಧಿಸಿದ್ದರು. ಇದೇ ಮೇ 7ರಂದು ಆಂಧ್ರ ಪ್ರದೇಶದಲ್ಲಿ ಮತದಾನ ನಡೆಯಲಿದ್ದು, ಅಲ್ಲಗಡ್ಡ ಲೋಕಸಭಾ ಕ್ಷೇತ್ರದ ಪ್ರಮುಖ ಅಭ್ಯರ್ಥಿ ಸಾವಿಗೀಡಾಗಿರುವುದರಿಂದ ಮತದಾನವನ್ನು ಮುಂದೂಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.