ರಾಮದೇವ್ ಆಶ್ರಮದಲ್ಲಿ ಮೋದಿ ಪತ್ನಿ!
ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್ ರನ್ನು ಖ್ಯಾತ ಯೋಗಗುರು ಬಾಬಾ ರಾಮದೇವ್ ಅವರ ಆಶ್ರಮದಲ್ಲಿ ಗೌಪ್ಯವಾಗಿರಿಸಲಾಗಿದೆ.
ವಡೋದರಾ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ನಾಮಪತ್ರ ಸಲ್ಲಿಸುವ ವೇಳೆ ಜಶೋದಾಬೆನ್ ತಮ್ಮ ಪತ್ನಿ ಎಂದು ಘೋಷಿಸಿದ ಬೆನ್ನಲ್ಲೇ ನಾಪತ್ತೆಯಾಗಿರುವ ಜಶೋದಾಬೆನ್ ಅವರು ಉತ್ತರಾಖಂಡದಲ್ಲಿರುವ ಯೋಗಗುರು ಬಾಬಾ ರಾಮದೇವ್ ಆಶ್ರಮದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖಾಸಗಿ ನಿಯತಕಾಲಿಕೆಯೊಂದು ತಾನು ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಈ ಅಂಶ ಬಹಿರಂಗವಾಗಿದೆ ಎಂದು ಹೇಳಿಕೊಂಡಿದೆ. ನರೇಂದ್ರಮೋದಿ ಅವರು ವಡೋದರಾ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಬಳಿಕ ನಾಪತ್ತೆಯಾಗಿದ್ದ ಜಶೋದಾಬೆನ್ ಅವರು ಚಾರ್ ದಾಮ್ ತೀರ್ಥಕ್ಷೇತ್ರಕ್ಕೆ ಹೋಗಿದ್ದರು. ಈ ಮಾಹಿತಿ ಸತ್ಯವಾದರೂ, ಮಾರ್ಗ ಮಧ್ಯೆ ಅವರನ್ನು ನರೇಂದ್ರ ಮೋದಿ ಅವರ ಬೆಂಬಲಿಗರು ಬೇರೆಡೆಗೆ ಕರೆದೊಯ್ದಿದ್ದಾರೆ. ಮಾಧ್ಯಮಗಳಿಗೆ ಮತ್ತು ಪ್ರಮುಖವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಜಶೋದಾಬೆನ್ ಅವರು ಸಿಗಬಾರದು ಎಂಬ ಒಂದೇ ಕಾರಣದಿಂದ ಅವರಿಗೆ ಭಾರಿ ಭದ್ರತೆ ಒದಗಿಸಲಾಗಿದ್ದು, ಯಾತ್ರಾರ್ಥಿಗಳ ವೇಶದಲ್ಲಿ ಜಶೋದಾಬೆನ್ ರನ್ನು ನರೇಂದ್ರ ಮೋದಿ ಬೆಂಬಲಿಗರು ಕರೆದೊಯ್ದಿದ್ದಾರೆ ಎಂದು ತಿಳಿದುಬಂದಿದೆ.
ಮೊದಲು ಜಶೋದಾಬೆನ್ ರನ್ನು ಅಹ್ಮದಾಬಾದ್ ಗೆ ಕರೆತಂದು ಅಲ್ಲಿಂದ ವಿಶೇಷ ವಿಮಾನದಲ್ಲಿ ಉತ್ತರಾಖಂಡಕ್ಕೆ ಕರೆದೊಯ್ಯಲಾಗಿದೆ. ಉತ್ತರಾಖಂಡದ ರಿಷಿಕೇಶದಲ್ಲಿರುವ ನೀಲಕಂಠ ಮಹಾದೇವ ದೇವಾಲಯದ ಆಶ್ರಮದಲ್ಲಿ ಜಶೋದಾಬೆನ್ ರನ್ನು ಇರಿಸಲಾಗಿದೆ. ಅಲ್ಲಿ ಬಾಬಾ ರಾಮದೇವ್ ಅವರ ಬೆಂಬಲಿಗರು ಜಶೋದಾಬೆನ್ ರನ್ನು ಹದ್ದಿನಕಣ್ಣಿನಿಂದ ಕಾಯುತ್ತಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಮತ್ತೊಂದು ಮೂಲಗಳು ಹೇಳಿರುವಂತೆ ನರೇಂದ್ರ ಮೋದಿ ಅವರು ಜಶೋದಾಬೆನ್ ತಮ್ಮ ಪತ್ನಿ ಎಂದು ಘೋಷಣೆ ಮಾಡುತ್ತಲೇ ಕೆಲ ಹಿಂದೂಪರ ಸಂಘಟನೆಗಳ ಸದಸ್ಯರು ಮತ್ತು ಗುಜರಾತ್ ಮೂಲದ ಕೆಲ ಭದ್ರತಾ ಸಿಬ್ಬಂದಿಗಳು ಜಶೋದಾ ಬೆನ್ ಅವರನ್ನು ಕರೆದೊಯ್ದಿದ್ದಾರೆ. ಅವರ ಬಳಿ ತಾವು ಕೂಡ ಯಾತ್ರಾರ್ಥಿಗಳು ಎಂದು ಹೇಳಿಕೊಂಡ ಅವರು, ಜಶೋದಾಬೆನ್ ರನ್ನು ಅಹ್ಮದಾಬಾದ್ ಗೆ ಕರೆತಂದು ಅಲ್ಲಿಂದ ವಿಶೇಷ ವಿಮಾನದಲ್ಲಿ ಉತ್ತರಾಖಂಡಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದ ದ್ವಾರಕಾ ಪೀಠದ ಮಠಾಧಿಪತಿ ಸ್ವಾಮಿ ಸ್ವರೂಪಾನಂದ ಅವರ ಆಶ್ರಮದ ಮೂಲಗಳು ತಿಳಿಸಿರುವಂತೆ ಉತ್ತರಾಖಂಡದ ಪ್ರಮುಖ ಆಶ್ರಮವೊಂದರಲ್ಲಿ ಜಶೋದಾಬೆನ್ ರನ್ನು ಇಡಲಾಗಿದೆ. ಆದರೆ ಈ ವಿಚಾರ ಸ್ವತಃ ಜಶೋದಾಬೆನ್ ಅವರಿಗೂ ಕೂಡ ತಿಳಿದಿಲ್ಲ. ಅವರ ಸುತ್ತ ಯಾತ್ರಾರ್ಥಿಗಳ ವೇಷದಲ್ಲಿ ಭದ್ರತಾ ಸಿಬ್ಬಂಧಿಗಳಿದ್ದು, ಜಶೋದಾಬೆನ್ ಅವರಿಗೆ ತಿಳಿಯದಂತೆ ಅವರನ್ನು ಕಾಯುತ್ತಿದ್ದಾರೆ.
ಜಶೋದಾಬೆನ್ ಸಾರ್ವಜನಿಕವಾಗಿದ್ದರೆ ಅವರನ್ನು ಕಾಂಗ್ರೆಸ್, ಮಾಧ್ಯಮಗಳು ಅಥವಾ ಇತರೆ ಮೋದಿ ವಿರೋಧಿಗಳು ಸಂಪರ್ಕಿಸುವ ಸಾಧ್ಯತೆ ಇದ್ದು, ಇದರಿಂದ ನರೇಂದ್ರ ಮೋದಿ ಅವರ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂಬ ಒಂದೇ ಕಾರಣದಿಂದ ಜಶೋದಾಬೆನ್ ರನ್ನು ಅವರಿಗೇ ತಿಳಿಯದಂತೆ 'ಅಪಹರಣ' ಮಾಡಲಾಗಿದ್ದು, ಅಪಹರಣಕ್ಕೆ ಯೋಗಗುರು ಬಾಬಾ ರಾಮದೇವ್ ಅವರು ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.