ಆಗಸದಲ್ಲಿ ಹೈಡ್ರಾಮಾ: ಆಸ್ಟ್ರೇಲಿಯಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ವಿಮಾನವನ್ನು ಅಪಹರಿಸುವುದಾಗಿ ಪ್ರಯಾಣಿಕ ಬೆದರಿಕೆ ಹಾಕಿದ..
ನವದೆಹಲಿ: ವಿಮಾನವನ್ನು ಅಪಹರಿಸುವುದಾಗಿ ಪ್ರಯಾಣಿಕನೊಬ್ಬ ಬೆದರಿಕೆ ಹಾಕಿದ ಪರಿಣಾಮ ವರ್ಜಿನ್ ಆಸ್ಟ್ರೇಲಿಯಾ 737-800 ಸಂಖ್ಯೆ ವಿಮಾನ ಕೆಲಕಾಲ ಗೊಂದಲದ ಗೂಡಾಗಿತ್ತು.
ವರ್ಜಿನ್ ಆಸ್ಟ್ರೇಲಿಯಾ ವಿಮಾನವನ್ನು ದುಷ್ಕರ್ಮಿಗಳು ಅಪಹರಿಸಿರುವ ಕುರಿತು ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಬಾಲಿ ವಿಮಾನ ನಿಲ್ದಾಣದ ಅಧಿಕಾರಿಗಳು ವಿಮಾನ ಅಪಹರಣ ವಿವಾದಕ್ಕೆ ತೆರೆ ಎಳೆದಿದ್ದಾರೆ. ವಿಮಾನ ಹೈಜಾಕ್ ಆಗಿಲ್ಲ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ಟ್ರೇಲಿಯಾದ ಬ್ರಿಸ್‌ಬೇನ್ ನಿಂದ ಬಾಲಿಯತ್ತ ತೆರಳುತ್ತಿದ್ದ ವಿಮಾನವನ್ನು ಅಪಹರಿಸುವುದಾಗಿ ಬೆದರಿಕೆ ಹಾಕಿದ್ದ ಪ್ರಯಾಣಿಕನನ್ನು ಬಂಧಿಸಲಾಗಿದ್ದು, ಅತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬ್ರಿಸ್‌ಬೇನ್‌ನಿಂದ ಬಾಲಿಯತ್ತ ಪ್ರಯಾಣ ಬೆಳೆಸಿದ್ದ ಆಸ್ಟ್ರೇಲಿಯಾದ ವರ್ಜಿನ್ ಆಸ್ಟ್ರೇಲಿಯಾದ 137-800 ಸಂಖ್ಯೆಯ ವಿಮಾನವನ್ನು ಆಸ್ಟ್ರೇಲಿಯಾ ಮೂಲದ ಪ್ರಯಾಣಿಕನೋರ್ವ ಅಪಹರಿಸುವ ಬೆದರಿಕೆ ಹಾಕಿದ್ದು, ಕಾಕ್‌ಪೀಟ್ ನಲ್ಲಿದ್ದ ಪೈಲಟ್‌ಗಳನ್ನು ಹೆದರಿಸಿದ್ದಾನೆ. ಏರುಧ್ವನಿಯಲ್ಲಿ ಕೋಪೊದ್ರಿಕ್ತನಾಗಿ ಮಾತನಾಡುತ್ತಿದ್ದ ಪ್ರಯಾಣಿಕ ವಿಮಾನವನ್ನು ಅಪಹರಿಸುವುದಾಗಿ ಬೆದರಿಕೆ ಹಾಕುತ್ತಿದ್ದಂತೆ ಪೈಲಟ್ ಈ ವಿಚಾರವನ್ನು ವಾಯುಗೋಪುರಕ್ಕೆ ರವಾನಿಸಿದ್ದು, ಸಮೀಪದ ಬಾಲಿ ವಿಮಾನ ನಿಲ್ದಾಣದಲ್ಲಿ ಕೂಡಲೇ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು.
ಪೈಲಟ್ ಸಂದೇಶ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಾಲಿ ವಿಮಾನ ನಿಲ್ದಾಣದ ಅಧಿಕಾರಿಗಳು ನಿಲ್ದಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಕೂಡಲೇ ವಿಮಾನವನ್ನು ಬಾಲಿ ಸಮೀಪವಿರುವ ರೆಸಾರ್ಟ್‌ನ ರನ್ ವೇ ನಲ್ಲಿ ಲ್ಯಾಂಡಿಂಗ್ ಮಾಡಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಬೆದರಿಕೆ ಹಾಕಿದ್ದ ಪ್ರಯಾಣಿಕನನ್ನು ಬಂಧಿಸಿದ್ದು, ಪ್ರಯಾಣಿಕನ ವೈದ್ಯಕೀಯ ತಪಾಸಣೆ ನಡೆಸಿ ಆತ ಪಾನಮತ್ತನಾಗಿರುವುದನ್ನು ಅಧಿಕಾರಿಗಳು ಧೃಢಪಡಿಸಿಕೊಂಡಿದ್ದಾರೆ. ಪ್ರಸ್ತುತ ಆತ ಆಸ್ಟ್ರೇಲಿಯಾ ಮೂಲದವನೆಂದು ತಿಳಿದುಬಂದಿದ್ದು, ಆತನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ.
ಅಲ್ಲದೆ ವಿಮಾನವು ಹೈಜಾಕ್ ಆಗಿಲ್ಲ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಕುಡುಕ ಪ್ರಯಾಣಿಕನ ರಂಪಾಟದಿಂದಾಗಿ ಅವರು ಆತಂಕಕ್ಕೊಳಗಾಗಿದ್ದಾರೆ. ಅವರಿಗೆ ಬೇರೆ ವಿಶೇಷ ವಿಮಾನದ ವ್ಯವಸ್ಥೆ ಮಾಡಿ ಸ್ಥಳಾಂತರಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.