ಕಾಂಗ್ರೆಸ್ ಶ್ರಮದಿಂದಾಗಿ ತೆಲಂಗಾಣ: ರಾಹುಲ್ ಗಾಂಧಿ
ಕಾಂಗ್ರೆಸ್ ಪಕ್ಷದ ನಿರಂತರ ಶ್ರಮದಿಂದಾಗಿಯೇ ನೂತನ ತೆಲಂಗಾಣ ರಾಜ್ಯ ರಚನೆಯಾಗಿದೆ..
ವರಂಗಲ್: ಕಾಂಗ್ರೆಸ್ ಪಕ್ಷದ ನಿರಂತರ ಶ್ರಮದಿಂದಾಗಿಯೇ ನೂತನ ತೆಲಂಗಾಣ ರಾಜ್ಯ ರಚನೆಯಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಶುಕ್ರವಾರ ಆಂಧ್ರ ಪ್ರದೇಶದ ವರಂಗಲ್ ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ತೆಲುಗು ದೇಶಂ, ಬಿಜೆಪಿ ಮತ್ತು ಟಿಆರ್ ಎಸ್ ಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತೆಲಂಗಾಣ ರಚನೆಗೆ ಬಿಜೆಪಿ ಮತ್ತು ತೆಲುಗುದೇಶಂ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದವು. ಅಲ್ಲದೆ ನೂತನ ರಾಜ್ಯ ರಚನೆ ಪ್ರಕ್ರಿಯೆಗೆ ಅಡ್ಡಿ ಪಡಿಸಿದ್ದವು. ಕಾಂಗ್ರೆಸ್ ಪಕ್ಷ ತೆಲಂಗಾಣ ಭಾಗದ ಜನತೆಗೆ ಮಾತುಕೊಟ್ಟಿತ್ತು, ಆ ಮಾತಿಗಾಗಿ ಹಲವು ಅಡೆತಡೆಗಳು ಉಂಟಾದರೂ ತೆಲಂಗಾಣ ರಾಜ್ಯವನ್ನು ರಚಿಸಿದ್ದೇವೆ.
ತೆಲಂಗಾಣ ರಾಜ್ಯ ರಚನೆಯಾಗಿದೆ ಎಂದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ರಾಹುಲ್ ಗಾಂಧಿ ಹೇಳಿದರು. ಅಂತೆಯೇ ತೆಲಂಗಾಣ ರಾಷ್ಟ್ರೀಯ ಸಮಿತಿ ಪಕ್ಷದ ಕುರಿತು ಮಾತನಾಡಿದ ರಾಹುಲ್ ಗಾಂಧಿ ಅವರು, ಕೆ.ಚಂದ್ರ ಶೇಖರ ರಾವ್ ಅವರನ್ನು ಪರೋಕ್ಷವಾಗಿ ವಚನ ಭ್ರಷ್ಟರೆಂದು ಹೇಳಿದರು. ತೆಲಂಗಾಣ ರಾಜ್ಯ ರಚನೆಯಾದರೆ ತಮ್ಮ ಟಿಆರ್ ಎಸ್ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನ ಮಾಡುವುದಾಗಿ ಕೆಸಿಆರ್ ಹೇಳಿದ್ದರು. ಆದರೆ ನೂತನ ರಾಜ್ಯ ರಚನೆಯಾದ ಒಂದೇ ಗಂಟೆಯಲ್ಲಿ ಅವರು ಉಲ್ಟಾ ಹೊಡೆದರು.
ಟಿಆರ್ ಎಸ್ ಪಕ್ಷವನ್ನು ಕಾಂಗ್ರೆಸ್ ಪಕ್ಷದಲ್ಲಿ ವಿಲೀನ ಮಾಡುವುದಿಲ್ಲ ಎಂದು ಕೆಸಿಆರ್ ಹೇಳಿದರು. ಕೆಸಿಆರ್ ತೆಲಂಗಾಣ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದಕ್ಕಾಗಿಯೇ ಅವರು ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸಿದರೆ ದೇಶದಲ್ಲಿ ದೊಡ್ಡ ವಿದ್ಯುತ್ ಘಟಕವನ್ನು ಸ್ಥಾಪಿಸಲಾಗುವುದು ಎಂದೂ ರಾಹುಲ್ ಗಾಂಧಿ ಭರವಸೆ ನೀಡಿದರು.