ಉತ್ತರ ಆಫ್ಘಾನಿಸ್ತಾನದಲ್ಲಿ ಪ್ರವಾಹ: 180 ಸಾವು
ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಬಿರುಗಾಳಿ ಸಹಿತ ಮಳೆಯಿಂದಾಗಿ ಉತ್ತರ ಆಫ್ಘಾನಿಸ್ತಾನದಲ್ಲಿ ಭಾರಿ ಪ್ರವಾಹ ಉಂಟಾಗಿದೆ.
ಕಾಬೂಲ್: ಕಳೆದ ಕೆಲವು ದಿನಗಳಿಂದ ಬೀಳುತ್ತಿರುವ ಬಿರುಗಾಳಿ ಸಹಿತ ಮಳೆಯಿಂದಾಗಿ ಉತ್ತರ ಆಫ್ಘಾನಿಸ್ತಾನದಲ್ಲಿ ಭಾರಿ ಪ್ರವಾಹ ಉಂಟಾಗಿದೆ.
ಪ್ರವಾಹದಿಂದಾಗಿ ಉತ್ತರ ಆಫ್ಘಾನಿಸ್ತಾನದ ಬಹುತೇಕ ಪ್ರದೇಶಗಳು ಜಲಾವೃತ್ತಗೊಂಡಿದ್ದು, 180ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ. ಅಲ್ಲದೆ ಸುಮಾರು 5000 ಸಾವಿರ ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ರಕ್ಷಣಾ ಸಿಬ್ಬಂದಿಗಳು ಈಗಾಗಲೇ 200ಕ್ಕೂ ಅಧಿಕ ಮಂದಿಯನ್ನು ರಕ್ಷಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಉತ್ತರ ಆಫ್ಘಾನಿಸ್ತಾನದ ಜಾವ್ಝನ್ ಪ್ರಾಂತ್ಯದಲ್ಲಿ ಹೆಚ್ಚಿನ ಹಾನಿಯಾಗಿದ್ದು, ಬಹುತೇಕ ಮನೆಗಳು ನಿರಿನಲ್ಲಿ ಮುಳುಗಿದೆ.
ಮೂಲಗಳ ಪ್ರಕಾರ ಸುಮಾರು 500ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಹೇಳಲಾಗುತ್ತಿದೆ. ಅಪಾಯದಲ್ಲಿ ಸಿಲುಕಿರುವ ಜನರ ರಕ್ಷಣೆಗಾಗಿ ರಕ್ಷಣಾ ಪಡೆಗಳು ಹರಸಾಹಸ ಪಡುತ್ತಿದ್ದು, ಆಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸ್ ಪಡೆಗಳು ಸಾಥ್ ನೀಡಿವೆ. ಕಳೆದ ಒಂದು ದಶಕದಲ್ಲಿಯೇ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ದೊಡ್ಡ ನೈಸರ್ಗಿಕ ವಿಕೋಪ ಇದಾಗಿದ್ದು, ಜನರ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಆಫ್ಘಾನಿಸ್ತಾನ ಸರ್ಕಾರ ಹೇಳಿದೆ.
ಕಾರ್ಯಾಚರಣೆಗಾಗಿ ರಕ್ಷಣಾಪಡೆಯ ಹೆಲಿಕಾಪ್ಟರ್ ಮತ್ತು ವಿಶೇಷ ವಿಮಾನಗಳನ್ನು ಬಳಸಲಾಗುತ್ತಿದೆ ಎಂದು ರಕ್ಷಣಾ ಕಾರ್ಯಾಚರಣೆ ನೇತೃತ್ವ ವಹಿಸಿರುವ ರಕ್ಷಣಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.