ಕಾಕ್‌ಪೀಟ್ ಅನ್ನು ಶೌಚಾಲಯವೆಂದು ತಿಳಿದು ರಾದ್ಧಾಂತ
ಪೈಲಟ್‌ಗಳಿರುವ ಕಾಕ್‌ಪೀಟ್ ಅನ್ನು ಶೌಚಾಲಯವೆಂದು ತಿಳಿದ ಪ್ರಯಾಣಿಕ ರಾದ್ಧಾಂತವೆಬ್ಬಿಸಿದ್ದೇ ವರ್ಜಿನ್ ಆಸ್ಟ್ರೇಲಿಯಾ ವಿಮಾನ ಅಪಹರಣ ಹೈಡ್ರಾಮಕ್ಕೆ ನಾಂದಿ...
ಬಾಲಿ: ಪೈಲಟ್‌ಗಳಿರುವ ಕಾಕ್‌ಪೀಟ್ ಅನ್ನು ಶೌಚಾಲಯವೆಂದು ತಿಳಿದ ಪ್ರಯಾಣಿಕ ರಾದ್ಧಾಂತವೆಬ್ಬಿಸಿದ್ದೇ ವರ್ಜಿನ್ ಆಸ್ಟ್ರೇಲಿಯಾ ವಿಮಾನ ಅಪಹರಣ ಹೈಡ್ರಾಮಕ್ಕೆ ನಾಂದಿ ಎಂದು ತಿಳಿದು ಬಂದಿದೆ.
ನಿನ್ನೆ ಆಸ್ಟ್ರೇಲಿಯಾದ ಬ್ರಿಸ್‌ಬೇನ್ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆಗಿದ್ದ ವರ್ಜಿನ್ ಆಸ್ಟ್ರೇಲಿಯಾ ವಿಮಾನ ಸಂಸ್ಥೆಯ 737-800 ವಿಮಾನ, ಕೆಲಹೊತ್ತಿನಲ್ಲೇ ಬಾಲಿ ವಾಯುಗೋಪುರಕ್ಕೆ ಹೈಜಾಕ್ ಮುನ್ನೆಚ್ಚರಿಕಾ ಸಂದೇಶವನ್ನು ರವಾನಿಸಿತ್ತು. ಹೀಗಾಗಿ ಬಾಲಿ ವಿಮಾನ ನಿಲ್ದಾಣದ ಸಮೀಪ ದೊಡ್ಡ ಹೈಡ್ರಾಮವೇ ನಡೆದು ಹೋಗಿತ್ತು. ಆದರೆ ಈ ಘಟನೆಗೆ ಆಸ್ಟ್ರೇಲಿಯಾ ಮೂಲದ ಕುಡುಕ ಪ್ರಯಾಣಿಕನೇ ಕಾರಣ.
ಕುಡಿದ ಮತ್ತಿನಲ್ಲಿದ್ದ ಪ್ರಯಾಣಿಕ ಪೈಲಟ್‌ಗಳಿರುವ ಕಾಕ್‌ಪೀಟ್ ಅನ್ನು ಶೌಚಾಲಯವೆಂದು ತಿಳಿದು ತೆರೆಯಲು ಯತ್ನಿಸಿದ್ದಾನೆ. ಇದಕ್ಕೆ ವಿಮಾನ ಸಿಬ್ಬಂದಿ ಅವಕಾಶ ನೀಡದಿದ್ದಾಗ ಅವರನ್ನು ಹೆದರಿಸಿ, ವಿಮಾನವನ್ನು ಹೈಜಾಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಪ್ರಯಾಣಿಕನ ಕೋಪೋದ್ರಿಕ್ತ ಮಾತುಗಳಿಂದ ಹೆದರಿದ ಪೈಲಟ್‌ಗಳು ಕೂಡಲೇ ಈ ವಿಚಾರವನ್ನು ಬಾಲಿ ವಾಯುಗೋಪುರಕ್ಕೆ ರವಾನಿಸಿದ್ದು, ವಿಮಾನ ನಿಲ್ದಾಣದಲ್ಲಿ ಹೈಜಾಕ್ ಅಲರ್ಟ್ ಘೋಷಣೆ ಮಾಡಲಾಗಿತ್ತು.
ಬಾಲಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲ ವಿಮಾನಗಳ ದಾರಿಯನ್ನು ಬದಲಿಸಿ, ನಿಲ್ದಾಣವನ್ನು ಸುಮಾರು 2 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ವರ್ಜಿನ್ ಆಸ್ಟ್ರೇಲಿಯಾ ವಿಮಾನ ಬಾಲಿ ಬಳಿಯ ರೆಸಾರ್ಟ್ ವೊಂದರ ರನ್‌ವೇನಲ್ಲಿ ಭೂಸ್ಪರ್ಶ ಮಾಡುತ್ತಿದ್ದಂತೆಯೇ ವಿಮಾನವನ್ನು ಸುತ್ತುವರೆದ ಭದ್ರತಾ ಸಿಬ್ಬಂದಿ ರಾದ್ಧಾಂತಕ್ಕೆ ಕಾರಣನಾದ ಪ್ರಯಾಣಿಕನಿಗೆ ಕೈಕೋಳ ತೊಡಿಸಿ ಬಂಧಿಸಿದ್ದಾರೆ. ಆರೋಗ್ಯ ತಪಾಸಣೆಯ ಬಳಿಕ ಆತ ಕುಡಿದ ಮತ್ತಿನಲ್ಲಿದ್ದು, ಖಿನ್ನತೆಯಿಂದ ಬಳಲುತ್ತಿದ್ದ .ಅಲ್ಲದೆ ಇಂಡೋನೇಷ್ಯಾ ಮೂಲದ ಹೆಂಡತಿ ನಾಪತ್ತೆಯಿಂದ ಈತ ಕಂಗೆಟ್ಟಿದ್ದ ಎಂದು ವಿಮಾನ ನಿಲ್ದಾಣದ ಪೊಲೀಸರು ತಿಳಿಸಿದ್ದಾರೆ.
ಮತ್ತೊಂದು ಮೂಲಗಳ ಪ್ರಕಾರ ಆತ ಮಧ್ಯಪಾನ ಮಾಡಿರಲಿಲ್ಲ. ಬದಲಿಗೆ ಕೌಟುಂಬಿಕ ವ್ಯಾಜ್ಯಗಳಿಂದಾಗಿ ಈತ ಖಿನ್ನತೆಗೊಳಗಾಗಿದ್ದ. ಹೀಗಾಗಿಯೇ ಈತ ವಿಮಾನದಲ್ಲಿನ ಸಿಬ್ಬಂದಿಗಳೊಂದಿಗೆ ತನ್ನ ದುರ್ವತನೆ ತೋರಿದ್ದಾನೆ ಎಂದು ಹೇಳಲಾಗುತ್ತಿದೆ.