ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮೋದಿಯನ್ನು ಹಿಟ್ಲರ್ ಎಂದ ಚಿರು ಮೇಲೆ ಮೊಟ್ಟೆ ಎಸೆತ

ನರೇಂದ್ರ ಮೋದಿ ಅವರನ್ನು ಟೀಕಿಸಿದ ಕೇಂದ್ರ ಸಚಿವ ಮತ್ತು ನಟ ಚಿರಂಜೀವಿ ಅವರ ಮೇಲೆ ಮೊಟ್ಟೆ..

Srinivasa Murthy VN
Updated On : 26 Apr 2014, 6:26 am

ಹೈದರಾಬಾದ್: ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಕೇಂದ್ರ ಸಚಿವ ಮತ್ತು ನಟ ಚಿರಂಜೀವಿ ಅವರ ಮೇಲೆ ಮೊಟ್ಟೆ ಎಸೆಯಲಾಗಿದೆ.

ಆಂಧ್ರ ಪ್ರದೇಶದ ಮಚಲೀಪಟ್ಟಣಂನಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಚಿರಂಜೀವಿ ಅವರು, ನರೇಂದ್ರ ಮೋದಿ ಅವರನ್ನು 'ಹಿಟ್ಲರ್‌' ವ್ಯಕ್ತಿತ್ವ ಉಳ್ಳ ಕ್ರೂರ ವ್ಯಕ್ತಿ ಎಂದು ಟೀಕಿಸಿದರು. ಈ ವೇಳೆ ಅಲ್ಲಿಯೇ ಇದ್ದ ಬಿಜೆಪಿ ಕಾರ್ಯಕರ್ತರು ನಟ ಚಿರಂಜೀವಿ ಮೇಲೆ ಮೊಟ್ಟೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿರಂಜೀವಿ ವಿರುದ್ಧ ಘೋಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು, ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಿದರು. ಈ ವೇಳೆ ಚಿರಂಜೀವಿ ಅವರು ತಮ್ಮ ಭಾಷಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಪರಿಸ್ಥಿತಿ ತಿಳಿಯಾದ ನಂತರ ಮತ್ತೆ ಭಾಷಣ ಮುಂದುವರೆಸಿದರು. ಪೊಲೀಸರ ಮಧ್ಯ ಪ್ರವೇಶದಿಂದಾಗಿ ಪರಿಸ್ಥಿತಿ ಶಾಂತವಾಯಿತು.

ನಂತರ ಮಾತನಾಡಿದ ಚಿರಂಜೀವಿ ಅವರು, ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ವಾಜಪೇಯಿ ಮತ್ತು ಆಡ್ವಾಣಿ ಅವರು ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ. ಬಿಜೆಪಿ ಕೋಮುವಾದಿ ಪಕ್ಷವಾಗಿದ್ದು, ರಾಜ್ಯದ ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಕೋಮುವಾದಿ ಸಿದ್ಧಾಂತವನ್ನು ರೂಢಿಸಿಕೊಂಡಿದೆ ಎಂದು ಚಿರಂಜೀವಿ ಹೇಳಿದರು. ಕಾಂಗ್ರೆಸ್ ಜನಪರ ಕಾರ್ಯಗಳನ್ನು ಜನತೆ ಮರೆಯುವುದಿಲ್ಲ. ಕಾಂಗ್ರೆಸ್ ಪಕ್ಷವನ್ನು ವಿನಾಶ ಮಾಡಲೆತ್ನಿಸಿದ ಹಲವು ಪಕ್ಷಗಳು ನಾಮಾವಶೇಷಗೊಂಡಿವೆ.

ದೇಶದ ಜನತೆ ಮೂರ್ಖರಲ್ಲ. ಯಾರು ಯಾವ ರೀತಿ ಕೆಲಸಗಳನ್ನು ಮಾಡಿದ್ದಾರೆ ಎಂಬುದು ಅವರಿಗೆ ತಿಳಿದಿದೆ. ರಾಜ್ಯ ವಿಭಜನೆಗೆ ನಿಜವಾದ ಕಾರಣ ಯಾರು ಎಂದು ಜನತೆಗೆ ತಿಳಿದಿದ್ದು, ಬಿಜೆಪಿ, ಟಿಡಿಪಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷಗಳು ತಮ್ಮ ತಪ್ಪಿಗಾಗಿ ಇದರ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ಚಿರಂಜೀವಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement