'ಮೋದಿ'ಯಿಂದ ದೇಶವನ್ನು ರಕ್ಷಿಸು ದೇವರೆ: ಸೋನಿಯಾ
ಬರ್ನಾಲಾ: ಓ ದೇವರೆ ಮೋದಿ ಮಾದರಿಯಿಂದ ದೇಶವನ್ನು ರಕ್ಷಿಸು ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಾರ್ಥಿಸಿದ್ದಾರೆ.
ಪಂಜಾಬ್ ನ ಬರ್ನಾಲಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸೋನಿಯಾ ಗಾಂಧಿ ಅವರು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನರೇಂದ್ರ ಮೋದಿ ಅವರ ಗುಜರಾತ್ ಅಭಿವೃದ್ಧಿ ಮಾದರಿಯನ್ನು ಟೀಕಿಸಿರುವ ಸೋನಿಯಾ ಗಾಂಧಿ ಅವರು, ಈ ರೀತಿಯ ಮಾದರಿಯಿಂದ ದೇಶವನ್ನು ರಕ್ಷಿಸು ಎಂದು ಪ್ರಾರ್ಥಿಸಿದ್ದಾರೆ.
'ದೇಶವನ್ನು ಒಡೆದು ಅಧಿಕಾರ ಹಿಡಿಯಬೇಕೆನ್ನುವ ಅಧಿಕಾರ ದಾಹಿಗಳಿಂದ ದೇಶವನ್ನು ರಕ್ಷಿಸು. ಗುಜರಾತ್ ಮಾದರಿ ಮೋದಿ ಮಾದರಿಯಾಗಿದ್ದು, ಇದರಿಂದ ಜನ ಸಾಮಾನ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬಿಜೆಪಿ ನಾಯಕರು ನರೇಂದ್ರ ಮೋದಿ ಅವರ ಮಾದರಿಯನ್ನು ಗುಜರಾತ್ ಮಾದರಿಯನ್ನಾಗಿ ದೇಶದ ಜನತೆ ಮೇಲೆ ಹೇರುತ್ತಿದ್ದಾರೆ. ಆದರೆ ಗುಜರಾತ್ ಮಾದರಿಯಲ್ಲಿ ರಾಜ್ಯ ಸಾಧಿಸಿದ್ದೇನು..? 50 ವರ್ಷಗಳಿಂದ ಜೀವನ ನಡೆಸುತ್ತಿರುವ ಸಿಖ್ಖರನ್ನು ಬಲವಂತವಾಗಿ ರಾಜ್ಯದಿಂದ ಹೊರಗಟ್ಟಲಾಗುತ್ತಿದೆ.
ರೈತರ ಭೂಮಿಯನ್ನು ಸರ್ಕಾರ ಕಸಿದುಕೊಂಡ ನಂತರ ರೈತರು ಗುಳೆ ಹೋಗಿದ್ದಾರೆ. ಕನಿಷ್ಟ ಪಕ್ಷ ಅವರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೂಡ ಆಗಿಲ್ಲ. 5 ವರ್ಷಕ್ಕಿಂತ ಕೆಳಗಿರುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 11 ರುಪಾಯಿಗಳಿಗಿಂತ ಕಡಿಮೆ ವೇತನ ಪಡೆಯುತ್ತಿರುವ ಬಡ ಜನರನ್ನು ಬಡತನ ರೇಖೆಗಿಂತ ಕೆಳಗಿನ ಜನರ ಪಟ್ಟಿ (ಬಿಪಿಎಲ್)ಗೆ ಸೇರಿಸಿಲ್ಲ. ರೈತರ ಭೂಮಿಯನ್ನು ದೊಡ್ಡ ತುಂಡುಗಳಾಗಿ ಕತ್ತರಿಸಿ ಕಡಲೆಪುರಿಯಂತೆ ಉದ್ಯಮಿಗಳಿಗೆ ಹಂಚಲಾಗಿದೆ. ಇದೇ ಏನು ಗುಜರಾತ್ ಮಾದರಿ ಎಂದು ಸೋನಿಯಾ ಗಾಂಧಿ ಪ್ರಶ್ನಿಸಿದರು.
ಬಿಜೆಪಿ ದ್ವೇಷ ರಾಜಕಾರಣದಲ್ಲಿ ಭರವಸೆ ಇಟ್ಟಿದ್ದು, ಭಾಷೆ, ಧರ್ಮ ಮತ್ತು ಜಾತಿ ಹೆಸರಲ್ಲಿ ದೇಶವನ್ನು ವಿಭಜಿಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ರೈತರ ಅಭಿವೃದ್ಧಿ, ಬಡ ಜನರ ಕ್ಷೇಮಾಭಿವೃದ್ಧಿ ಮತ್ತು ಕೋಮು ಸಾಮರಸ್ಯದಲ್ಲಿ ನಂಬಿಕೆ ಇಟ್ಟಿದೆ. ಹೀಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಸೋನಿಯಾ ಗಾಂಧಿ ಅವರು ಹೇಳಿದರು.
ಒಟ್ಟಾರೆ ಪಂಜಾಬ್ ನಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಸೋನಿಯಾ ಗಾಂಧಿ ಅವರು ನರೇಂದ್ರ ಮೋದಿ ಅವರ ಹೆಸರು ಹೇಳದಿದ್ದರೂ, ನೇರವಾಗಿ ಅವರನ್ನೇ ಕೇಂದ್ರವಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದರು.