'ವಾದ್ರಾ' ತನಿಖೆಗೆ ಆಗ್ರಹಿಸುತ್ತೇನೆ: ಯಶ್ವಂತ್ ಸಿನ್ಹಾ
ಬಿಜೆಪಿ ಅಧಿಕಾರಕ್ಕೆ ಬಂದರೆ ರಾಬರ್ಟ್ ವಾದ್ರಾ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸುತ್ತೇನೆ ಎಂದು ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ನವದೆಹಲಿ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಬರ್ಟ್ ವಾದ್ರಾ ವಿರುದ್ಧದ ಆರೋಪಗಳನ್ನು ತನಿಖೆಗೊಳಪಡಿಸುವಂತೆ ಆಗ್ರಹಿಸುತ್ತೇನೆ ಎಂದು ಬಿಜೆಪಿ ಮುಖಂಡ ಯಶ್ವಂತ್ ಸಿನ್ಹಾ ಹೇಳಿದ್ದಾರೆ.
ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶ್ವಂತ್ ಸಿನ್ಹಾ ಅವರು, ರಾಬರ್ಟ್ ವಾದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಸರ್ಕಾರ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳುತ್ತಿದೆ. ಆದರೆ ನನ್ನ ಗಮನಕ್ಕೆ ಬಂದಂತೆ ವಾದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ತನಿಖೆ ನಡೆಸುತ್ತಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ಖಂಡಿತವಾಗಿಯೂ ನಾನು ರಾಬರ್ಟ್ ವಾದ್ರಾ ಪ್ರಕರಣವನ್ನು ಕೂಲಂಕುಷವಾಗಿ ತನಿಖೆ ನಡೆಸುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ವೈಯುಕ್ತಿಕವಾಗಿ ನಾನು ಗಾಂಧಿ ಕುಟುಂಬದ ದ್ವೇಷಿಯಲ್ಲ. ರಾಬರ್ಟ್ ವಾದ್ರ ಪ್ರಕರಣವನ್ನು ನಾನು ವೈಯುಕ್ತಿಕವಾಗಿ ತೆಗೆದುಕೊಂಡಿಲ್ಲ. ಕೇಂದ್ರ ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತವಾಗಿಯೂ ನಾನು ರಾಬರ್ಟ್ ವಾದ್ರಾ ಪ್ರಕರಣವನ್ನು ವೈಯುಕ್ತಿಕವಾಗಿ ತೆಗೆದುಕೊಂಡು ತನಿಖೆಗೆ ಆದೇಶಿಸುವುದಿಲ್ಲ. ಆದರೆ ಕಾನೂನು ಬದ್ಧವಾಗಿ ಏನು ನಡೆಯಬೇಕೋ ಅದನ್ನು ನಾನು ಖಂಡಿತವಾಗಿಯೂ ನಡೆಸುತ್ತೇನೆ. ಒಂದು ವೇಳೆ ವಾದ್ರಾ ತಪ್ಪು ಮಾಡಿರದಿದ್ದರೆ ಖಂಡಿತವಾಗಿಯೂ ಅವರು ನಿರಪರಾಧಿಯಾಗುತ್ತಾರೆ ಎಂದು ಹೇಳಿದ್ದರು.