"ಡಿಸೆಂಬರ್-1"ಕ್ಕೆ ಹೆಚ್‌ಡಿಕೆ ವಿರೋಧ
ಇತ್ತೀಚೆಗೆ ತೆರೆಕಂಡ 'ಡಿಸೆಂಬರ್-1' ಚಿತ್ರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಗ್ರಾಮ ವಾಸ್ತವ್ಯದ ಸದಾಶಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಇತ್ತೀಚೆಗೆ ತೆರೆಕಂಡ 'ಡಿಸೆಂಬರ್-1' ಚಿತ್ರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದು, ಗ್ರಾಮ ವಾಸ್ತವ್ಯದ ಸದಾಶಯಕ್ಕೆ ಈ ಚಿತ್ರವು ವಿರುದ್ಧವಾಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಡಿಸೆಂಬರ್-1 ಚಿತ್ರ ನಿರ್ದೇಶಕ ವಿಕೃತ ಮನಸ್ಸಿನ ಪ್ರತೀಕವಾಗಿದೆ. ಚಿತ್ರವು ವಾಸ್ತವಾಂಶಕ್ಕೆ ಹತ್ತಿರವಾಗಿಲ್ಲ ಎಂದು ಹೇಳಿದರು. 'ಕೆಲವರು ಪ್ರಶಸ್ತಿಗಾಗಿಯೇ ಚಿತ್ರಗಳನ್ನು ಮಾಡುತ್ತಿದ್ದು, ಅಂತಹವರ ಸಾಲಿಗೆ ಪಿ.ಶೇಷಾದ್ರಿ ಅವರು ಕೂಡ ಸೇರಿದ್ದಾರೆ. ಗ್ರಾಮವಾಸ್ತವ್ಯವೆಂಬದು ಸದಾಶಯದ ಕಾರ್ಯಕ್ರಮವಾಗಿದ್ದು, ಚಿತ್ರವು ಆ ಸದಾಶಯದ ವಿರುದ್ಧವಾಗಿದೆ'.
'ಗ್ರಾಮವಾಸ್ಥವ್ಯದ ಕುರಿತು ತಪ್ಪು ಪರಿಕಲ್ಪನೆ ಮೂಡುವಂತೆ ಚಿತ್ರ ತಯಾರಿಸಲಾಗಿದ್ದು, ನನ್ನಿಂದ ತಪ್ಪಾಗಿದ್ದರೆ ನಿರ್ದೇಶಕರು ತೋರಿಸಲಿ. ಗ್ರಾಮವಾಸ್ತವ್ಯದಿಂದ ಯಾವುದೇ ಕುಟುಂಬ ಅಥವಾ ಮಹಿಳೆಗೆ ತೊಂದರೆಯಾಗಿಲ್ಲ. ಹಾಗೇನಾದರೂ ತೊಂದರೆಯಾಗಿದ್ದರೆ ಶೇಷಾದ್ರಿ ಅವರು ತೋರಿಸಲು. ಆ ಕುಟುಂಬದ ಜವಾಬ್ದಾರಿಯನ್ನು ನಾನೇ ಹೊರುತ್ತೇನೆ. ತೊಂದರೆಗೀಡಾದ ಹೆಣ್ಣುಮಗಳ ಕುಟುಂಬದ ರಕ್ಷಣೆಗೆ ಬದ್ಧನಾಗಿರುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಅಂತೆಯೇ ಚಿತ್ರದ ಮೂಲಕ ಗ್ರಾಮವಾಸ್ತವ್ಯದ ಸದಾಶಯಕ್ಕೆ ತದ್ವಿರುದ್ಧ ಅನಿಸಿಕೆ ಮೂಡುವಂತೆ ಚಿತ್ರ ತಯಾರಿಸಿರುವ ನಿರ್ದೇಶಕ ಪಿ.ಶೇಷಾದ್ರಿ ಅವರ ವಿರುದ್ಧ ಮೊಕದ್ದಮೆ ಹೂಡಲು ಚಿಂತನೆ ನಡೆಸಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಒಟ್ಟಾರೆ ಕಳೆದವಾರ ತೆರೆಕಂಡಿದ್ದ ಡಿಸೆಂಬರ್ 1 ಚಿತ್ರ ಗ್ರಾಮವಾಸ್ತವ್ಯದ ಸದಾಶಯಕ್ಕೆ ವಿರುದ್ಧವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ. ಆದರೆ ಈ ಹಿಂದೆ ಚಿತ್ರದ ಕುರಿತು ಮಾತನಾಡಿದ್ದ ನಿರ್ದೇಶಕ ಪಿ.ಶೇಷಾದ್ರಿ ಅವರು, ಪತ್ರಿಕೆಯಲ್ಲಿ ಬಂದ ವರದಿಯನ್ನು ಆಧರಿಸಿ ಚಿತ್ರ ತಯಾರಿಸಿದ್ದೇನೆ ಎಂದು ಹೇಳಿದ್ದರು.