ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನೌಕಾದುರಂತ: ದಕ್ಷಿಣ ಕೊರಿಯಾ ಪ್ರಧಾನಿ ರಾಜಿನಾಮೆ

ದಕ್ಷಿಣ ಕೊರಿಯಾದ ಪ್ರಧಾನಿ ಚುಂಗ್‌ಹಾಂಗ್‌ವನ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

Srinivasa Murthy VN
Updated On : 27 Apr 2014, 4:38 am

ನವದೆಹಲಿ: ದಕ್ಷಿಣ ಕೊರಿಯಾದ ಪ್ರಧಾನಿ ಚುಂಗ್‌ಹಾಂಗ್‌ವನ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಕಳೆದ ಏಪ್ರಿಲ್ 16ರಂದು ನಡೆದ ಪ್ರಯಾಣಿಕರ ನೌಕಾ ದುರಂತಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ತೀವ್ರ ಟೀಕೆ ಕೇಳಿಬರುತ್ತಿದ್ದಂತೆಯೇ ನೈತಿಕ ಹೊಣೆ ಹೊತ್ತು ಚುಂಗ್‌ಹಾಂಗ್‌ವನ್ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ರಾಜಿನಾಮೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಚುಂಗ್‌ಹಾಂಗ್‌ವನ್ ಅವರು, ನೌಕಾ ದುರಂತದಲ್ಲಿ ಮೃತಪಟ್ಟವರ ಸಂಬಂಧಿಕರ ಆಕ್ರಂದನ ಇಂದಿಗೂ ನನಗೆ ಕೇಳುತ್ತಿದೆ. ರಾತ್ರಿ ವೇಳೆ ದುರಂತ ನನ್ನ ಕಣ್ಣೆದುರಿಗೆ ಬಂದಂತಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ಏಪ್ರಿಲ್ 16ರಂದು ಸುಮಾರು 476 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ನೌಕೆ ದುರಂತಕ್ಕೀಡಾಗಿತ್ತು. ವಿದ್ಯಾರ್ಥಿಗಳು ಮತ್ತು ನೌಕಾ ಸಿಬ್ಬಂದಿ ಸೇರಿದಂತೆ ಸುಮಾರು 187 ಜನ ಮೃತಪಟ್ಟಿದ್ದು, 250ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದರು. ನೌಕಾ ದುರಂತ ನಡೆದು ಸುಮಾರು 9 ದಿನಗಳೇ ಕಳೆದರು ದುರಂತದಲ್ಲಿ ಕಣ್ಮರೆಯಾದವರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಕಣ್ಮರೆಯಾದವರ ಪತ್ತೆಗಾಗಿ ಸರ್ಕಾರ ಸರ್ವ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳುತ್ತಿದ್ದರೂ, ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಯೇ ಆಗುತ್ತಿದೆ.

ಪ್ರಮುಖವಾಗಿ ದ.ಕೊರಿಯಾದ ಪ್ರಧಾನಿ ಚುಂಗ್‌ಹಾಂಗ್‌ವನ್ ಅವರ ವಿರುದ್ಧ ವಿರೋಧ ಪಕ್ಷಗಳು ಸೇರಿದಂತೆ ಸ್ಥಳೀಯ ಆಡಳಿತ ಮಂಡಳಿಗಳು ಅಸಂತೃಪ್ತಿ ವ್ಯಕ್ತಪಡಿಸಿವೆ. ಹೀಗಾಗಿ ದುರಂತದ ನೈತಿಕ ಹೊಣೆಹೊತ್ತಿರುವ ಚುಂಗ್‌ಹಾಂಗ್‌ವನ್ ಅವರು ತಮ್ಮ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement