ಫ್ಲಾರಿಡಾ ಜೈಲಲ್ಲಿ ಭಾರಿ ಸ್ಫೋಟ: ಇಬ್ಬರು ಖೈದಿಗಳ ಸಾವು
ಅಮೆರಿಕದ ಫ್ಲಾರಿಡಾ ಜೈಲಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಇಬ್ಬರು ಖೈದಿಗಳು ಸಾವಿಗೀಡಾಗಿದ್ದಾರೆ.
ನವದೆಹಲಿ: ಅಮೆರಿಕದ ಫ್ಲಾರಿಡಾ ಜೈಲಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಇಬ್ಬರು ಖೈದಿಗಳು ಸಾವಿಗೀಡಾಗಿದ್ದಾರೆ.
ವಿಶ್ವದ ಪ್ರಮುಖ ಬಂಧೀಖಾನೆಗಳ ಪಟ್ಟಿಯಲ್ಲಿ ಸ್ಥಾನಪಡೆದಿರುವ ಅಮೆರಿಕದ ಫ್ಲಾರಿಡಾ ಬಂಧೀಖಾನೆಯಲ್ಲಿ ಬುಧವಾರ ರಾತ್ರಿ 11 ಗಂಟೆಯ ಸುಮಾರಿನಲ್ಲಿ (ಭಾರತೀಯ ಕಾಲಮಾನ ಬೆಳಗ್ಗೆ 11: 20) ಭಾರಿ ಸ್ಪೋಟ ಸಂಭವಿಸಿದ್ದು, ಇಬ್ಬರು ಖೈದಿಗಳು ಸಾವನ್ನಪ್ಪಿದ್ದಾರೆ. ಅಲ್ಲದೆ ಸುಮಾರು 100ಕ್ಕೂ ಅಧಿಕ ಖೈದಿಗಳು ಮತ್ತು ಜೈಲು ಸಿಬ್ಬಂದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಜೈಲಲ್ಲಿದ್ದ ಗ್ಯಾಸ್ ವ್ಯವಸ್ಥೆಯಲ್ಲಿನ ಸೋರಿಕೆಯಿಂದಾಗಿ ಸ್ಪೋಟ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಸ್ಫೋಟದ ತೀವ್ರತೆಗೆ ಜೈಲಿನ ಒಂದು ಭಾಗ ಕುಸಿತಗೊಂಡಿದ್ದು, ಅವಶೇಷಗಳಡಿಯಲ್ಲಿ ಮತ್ತಷ್ಟು ಮಂದಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ 50ಕ್ಕೂ ಅಧಿಕ ಅಗ್ನಿ ಶಾಮಕ ವಾಹನಗಳು ಮತ್ತು ಭದ್ರತಾ ಸಿಬ್ಬಂದಿಗಳು ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಶಂಕಿಸಲಾಗುತ್ತಿದೆ.
ಪ್ರಾಥಮಿಕ ಮಾಹಿತಿಗಳ ಅನ್ವಯ ಜೈಲಲ್ಲಿ ಭದ್ರತಾ ಸಿಬ್ಬಂದಿಗಳು ಮತ್ತು ಖೈದಿಗಳು ಸೇರಿ ಸುಮಾರು 600 ಕ್ಕೂ ಅಧಿಕ ಮಂದಿ ಇದ್ದರು ಎಂದು ತಿಳಿದು ಬಂದಿದೆ. 5 ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ಪೋಟದ ತೀವ್ರತೆ ಮತ್ತು ತೀವ್ರ ಬೆಂಕಿಯಿಂದಾಗಿ ಜೈಲಿನ ಬಹುತೇಕ ಭಾಗ ಬಲಹೀನವಾಗಿ, ಕುಸಿಯುವ ಭೀತಿ ಮೂಡಿಸಿದೆ. ಹೀಗಾಗಿ ಸುರಕ್ಷತಾ ಕ್ರಮವಾಗಿ ಜೈಲಿನಲ್ಲಿರುವ ಖೈದಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.