ಮೋದಿ ಹೇಳಿಕೆಯಿಂದ ಪ್ರಿಯಾಂಕಗೆ ಖುಷಿ ಇಲ್ಲ: ಚಿದಂಬರಂ
ಪ್ರಿಯಾಂಕಾ ತನ್ನ ಮಗಳಿದ್ದಂತೆ ಎಂಬ ನರೇಂದ್ರ ಮೋದಿ ಅವರ ಮಾತಿನಿಂದ ಅವರಿಗೆ ಖುಷಿಯಾಗಿದೆ ಎಂದೆನಿಸುವುದಿಲ್ಲ ಎಂದು ಚಿದಂಬರಂ ಅವರು ಹೇಳಿದ್ದಾರೆ.
ನವದೆಹಲಿ: ಪ್ರಿಯಾಂಕಾ ಗಾಂಧಿ ತನ್ನ ಮಗಳಿದ್ದಂತೆ ಎಂಬ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಮಾತಿನಿಂದ ಪ್ರಿಯಾಂಕಾಗೆ ಖುಷಿಯಾಗಿದೆ ಎಂದೆನಿಸುವುದಿಲ್ಲ ಎಂದು ಕೇಂದ್ರ ಸಚಿವ ಚಿದಂಬರಂ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಕೇಂದ್ರ ಸಚಿವ ಪಿ.ಚಿದಂಬರಂ ಅವರು, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು, ಪ್ರಿಯಾಂಕರನ್ನು ತಮ್ಮ ಮಗಳಂತೆ ಎಂದು ಹೇಳಿದ್ದಾರೆ. ಆದರೆ ಮೋದಿ ಅವರ ನಿಲುವಿನಿಂದ ಪ್ರಿಯಾಂಕಾ ಗಾಂಧಿ ಅವರಿಗೆ ಖುಷಿಯಾಗಿರುತ್ತದೆ ಎಂದು ನನಗನಿಸುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್ 27ರಂದು ಸರ್ಕಾರಿ ಸುದ್ದಿವಾಹಿನಿಯಲ್ಲಿ ಪ್ರಸಾರಗೊಂಡಿದ್ದ ಸಂದರ್ಶನದಲ್ಲಿ ಯುಪಿಎ ಸರ್ಕಾರದ ವಿರುದ್ಧ ಮಾತನಾಡಿದ್ದ ನರೇಂದ್ರ ಮೋದಿ ಅವರು, ಪ್ರಿಯಾಂಕ ಗಾಂಧಿ ಅವರು ತಮ್ಮ ಮಗಳ ಸಮಾನ ಎಂದು ಹೇಳಿದ್ದರು. ಮೋದಿ ಅವರ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವ್ಯಾಪಕ ಪರ ಮತ್ತು ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿವೆ.
ಏಪ್ರಿಲ್ 27ರಂದು ಬಿತ್ತರಗೊಂಡಿದ್ದ ನರೇಂದ್ರ ಮೋದಿ ಅವರ ಸಂದರ್ಶನ ಇದೀಗ ವಿವಾದಕ್ಕೀಡಾಗಿದೆ. ಪ್ರಸಾರವಾಗುವ ಮುನ್ನ ಅಂದರೆ 2 ದಿನಗಳ ಮುಂಚಿತವಾಗಿಯೇ ಸಂದರ್ಶನ ನಡೆದಿದ್ದು, ಬೇಕೆಂದೆ ಯುಪಿಎ ಸರ್ಕಾರ ಮತ್ತು ಕೇಂದ್ರ ವಾರ್ತಾ ಇಲಾಖೆ ಸಂದರ್ಶನ ಪ್ರಸಾರವಾಗುವುದನ್ನು ತಡೆಯುತ್ತಿದೆ ಎಂದು ಆರೋಪಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕಳೆದ ಏಪ್ರಿಲ್ 27ರಂದು 'ಖಾಸ್ ಮುಲಾಕತ್' ಎಂಬ ಹೆಸರಿನಲ್ಲಿ ಈ ಸಂದರ್ಶನವನ್ನು ಬಿತ್ತರಿಸಲಾಗಿತ್ತು.
ಈ ಹಿಂದೆ ಗುಜರಾತ್ ದೂರದರ್ಶನ ಕೇಂದ್ರದ ವಿರುದ್ಧ ಕಿಡಿಕಾರಿದ್ದ ನರೇಂದ್ರ ಮೋದಿ ಅವರು, ದೂರದರ್ಶನದಲ್ಲಿ ತಮ್ಮನ್ನು ಬ್ಲಾಕ್‌ಔಟ್ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಆದರೆ ದೂರದರ್ಶನದಿಂದಲೇ ಸಂದರ್ಶನದ ಪ್ರಸ್ತಾಪ ಕೇಳಿಬಂದಾಗ ನರೇಂದ್ರ ಮೋದಿ ಅವರು ಅಚ್ಚರಿ ವ್ಯಕ್ತಪಡಿಸಿದ್ದರು.
ಒಟ್ಟಾರೆ ದೂರದರ್ಶನದ ಈ ದಿಢೀರ್ ನಡವಳಿಕೆಯಿಂದಾಗಿ ಹಲವು ಅನುಮಾನಗಳು ಮೂಡುತ್ತಿವೆ. ನರೇಂದ್ರ ಮೋದಿ ಅವರನ್ನು ನಾಮಕಾವಸ್ತೆಗಾಗಿ ಸಂದರ್ಶಿಸಿದರೇ ಅಥವಾ ಮುಂದೇನಾದರೂ ಎನ್‌ಡಿಎ ಸರ್ಕಾರ ಆಡಳಿತಕ್ಕೆ ಬಂದಾಗ ಯಾವುದೇ ಭಿನ್ನಾಭಿಪ್ರಾಯ ತಲೆದೋರದಿರಲಿ ಎಂಬುದಕ್ಕಾಗಿ ಈ ಸಂದರ್ಶನ ನಡೆಸಿದರೆ ಎಂದು ಅನುಮಾನ ವ್ಯಕ್ತವಾಗುತ್ತಿದೆ.