ನವದೆಹಲಿ: ದೇಶದಲ್ಲಿ ಕೋಮು ಹಿಂಸಾಚಾರ ಘಟನೆಗಳು ಹೆಚ್ಚಾಗಲು ಎನ್‌ಡಿಎ ಸರ್ಕಾರವೇ ನೇರ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ.
ಕೇರಳದಲ್ಲಿ ಕಾರ್ಯಕಾರಿ ಸಮಿತಿಯ ಕಾರ್ಯನಿರ್ವಾಹಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಪ್ರಧಾನಿಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಹಾರಾಷ್ಟ್ರ ಸೇರಿದಂತೆ ದೇಶದಲ್ಲಿ 600ಕ್ಕೂ ಹೆಚ್ಚಿನ ಕೋಮುಗಲಭೆ ಘಟನೆಗಳು ನಡೆದಿದೆ ಎಂದು ಹೇಳಿದ್ದಾರೆ.
ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರ ಸ್ವೀಕರಿಸಿದ ನಂತರ ದೇಶದ ಉತ್ತರ ರಾಜ್ಯಗಳಲ್ಲಿ ಬಾರಿ ಪ್ರಮಾಣದಲ್ಲಿ ಕೋಮುಗಲಭೆಗಳು ನಡೆಯುತ್ತಿದೆ. ಯುಪಿಎ 1 ಅಥವಾ ಯುಪಿಎ 2ರ ಅವಧಿಯಲ್ಲಿ ಇಂತಹ ಯಾವುದೇ ಕೋಮುಗಲಭೆಗಳು ನಡೆದಿರಲಿಲ್ಲ. ಜಾತಿಯ ಹೆಸರಲ್ಲಿ ದೇಶದ ಜನತೆಯನ್ನು ವಿಭಜಿಸುವಂತಹ ಉದ್ದೇಶಪೂರ್ವಕ ಷಡ್ಯಂತ್ರಗಳು ನಡೆಯುತ್ತಿವೆ. ಕೇಂದ್ರ ಸರ್ಕಾರ ಇಂತಹ ಘಟನೆಗಳಿಗೆ ಪ್ರೇರಣೆ ನೀಡುತ್ತಿದೆ ಎಂದು ಸೋನಿಯಾ ಕಿಡಿಕಾರಿದ್ದಾರೆ.
ಸೋನಿಯಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು, ಸೋನಿಯಾರ ಆರೋಪಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಹೇಳಿದ್ದಾರೆ.
ಇತ್ತಿಚ್ಚೆಗಷ್ಟೇ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಕೋಮುಗಲಭೆ ಪ್ರಕರಣಗಳು ಹೆಚ್ಚಿರುವುದಕ್ಕೆ ಮೋದಿ ಸರ್ಕಾರವೇ ಕಾರಣ ಎಂದು ಹೇಳಿದ್ದರು.