ಬಳ್ಳಾರಿ: ಪ್ರತಿಷ್ಠಿತ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಎನ್.ವೈ.ಗೋಪಾಲಕೃಷ್ಣ ಅವರು ಭಾರಿ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಶ್ರೀರಾಮುಲು ಅವರ ಭದ್ರಕೋಟೆ ಎಂದೇ ಬಿಂಬಿತವಾಗಿರುವ ಬಳ್ಳಾರಿ ಗ್ರಾಮಾಂತರ ವಿಧಾನಸಭೆಗೆ ಕಾಂಗ್ರೆಸ್ ಪಕ್ಷ ಲಗ್ಗೆ ಇಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಗೌಡ ಅವರು ಭರ್ಜರಿ ಜಯ ದಾಖಲಿಸಿದ್ದಾರೆ. ಕ್ಷೇತ್ರದ ಎಲ್ಲ 15 ಸುತ್ತಿನ ಮತಎಣಿಕೆ ಕಾರ್ಯ ಮುಗಿದಿದ್ದು, ಕಾಂಗ್ರೆಸ್ ಪಕ್ಷದ ಗೋಪಾಲಕೃಷ್ಣ ಅವರು ಬರೋಬ್ಬರಿ 33, 144 ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಕ್ಷೇತ್ರದಲ್ಲಿ ಸತತ ನಾಲ್ಕು ಭಾರಿ ಜಯದಾಖಲಿಸಿದ್ದ ಗೋಪಾಲಕೃಷ್ಣ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದರು. ಗಣಿ ಧಣಿ ಜನಾರ್ಧನ ರೆಡ್ಡಿ ಅವರ ಆಪ್ತ ಸ್ನೇಹಿತ ಶ್ರೀರಾಮುಲು ಅವರ ಬಲಗೈ ಬಂಟ ಎಂದೇ ಬಿಂಬಿತವಾಗಿರುವ ಬಿಜೆಪಿ ಪಕ್ಷದ ಓಬಳೇಶ್ ಅವರು ಪ್ರಸಕ್ತ ಚುನಾವಣೆಯಲ್ಲಿ ತೀವ್ರ ಹಿನ್ನಡೆಯನ್ನು ಅನುಭವಿಸಿದ್ದು, ಒಟ್ಟು 50,795 ಮತಗಳನ್ನು ಪಡೆದಿದ್ದಾರೆ.
ನಾಯಕರ ಒಗ್ಗಟಿನಿಂದ ಗೆಲುವು: ಎನ್.ವೈ.ಗೋಪಾಲಕೃಷ್ಣ
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾಂಗ್ರೆಸ್‌ನ ನಾಯಕರ ಒಗ್ಗಟ್ಟೇ ಕಾರಣ ಎಂದು ಎನ್.ವೈ.ಗೋಪಾಲಕೃಷ್ಣ ಅವರು ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಚುನಾವಣಾ ಮತಎಣಿಕೆ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೋಪಾಲ ಕೃಷ್ಣ ಅವರ ಗೆಲುವು ಬಹುತೇಕ ಖಚಿತವಾಗಿದೆ. ಒಟ್ಟು 12 ಸುತ್ತಿನ ಮತ ಎಣಿಕೆ ಕಾರ್ಯಗಳು ಮುಗಿದಿದ್ದು, ಗೋಪಾಲಕೃಷ್ಣ ಅವರು ಸುಮಾರು 22 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಕೇವಲ 3 ಸುತ್ತಿನ ಮತ ಎಣಿಕೆ ಕಾರ್ಯ ಮಾತ್ರ ಬಾಕಿ ಇದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಈಗಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನು ತಮ್ಮ ಗೆಲುವು ಸಮೀಪವಾಗುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಎನ್.ವೈ.ಗೋಪಾಲಕೃಷ್ಣ ಅವರು, ನಾಯಕರು ಒಗ್ಗಟ್ಟಿನಿಂದಾಗಿ ಕೆಲಸ ಮಾಡಿದ್ದರಿಂದಲೇ ಪ್ರಸಕ್ತ ಚುನಾವಣೆಯಲ್ಲಿ ತಾವು ಗೆಲುವು ದಾಖಲಿಸುವಂತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನಿಂದಾಗಿ ಪಕ್ಷದ ಮುಖಂಡರಿಗೆ ತೀವ್ರ ನೋವಾಗಿತ್ತು. ನಾಲ್ಕು ಬಾರಿ ನಾನು ಈ ಕ್ಷೇತ್ರದಿಂದ ಗೆಲುವು ಸಾಧಿಸಿದ್ದೆ. ಆದರೆ ಕಳೆದ ಬಾರಿ ಸೋಲುಕಾಣುವಂತಾಗಿತ್ತು. ಇದರಿಂದ ಪಕ್ಷದ ಹಿರಿಯ ಮುಖಂಡರಿಗೆ ನೋವಾಗಿತ್ತು.
ಆದರೆ ಈ ಭಾರಿ ಕ್ಷೇತ್ರದ ಜನತೆ ನಮ್ಮನ್ನು ನಂಬಿ ಮತ್ತೆ ನನಗೆ ಮತ್ತೆ ಗೆಲುವು ನೀಡಿದ್ದಾರೆ. ಕ್ಷೇತ್ರದಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳ ನಡುವೆಯೂ ಪಕ್ಷಕ್ಕೆ ಗೆಲುವು ಲಭಿಸಿದೆ. ಹೀಗಾಗಿ ನಾನು ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.