ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಪೋಟ, 16 ಸಾವು
ಇಂಡೋನೇಷ್ಯಾದಲ್ಲಿ ಸ್ಫೋಟಗೊಂಡಿದ್ದ ಜ್ವಾಲಾಮುಖಿಯಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೆ ಏರಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ನವದೆಹಲಿ: ಇಂಡೋನೇಷ್ಯಾದಲ್ಲಿ ಸ್ಫೋಟಗೊಂಡಿದ್ದ ಜ್ವಾಲಾಮುಖಿಯಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೆ ಏರಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.
ಇಂಡೋನೇಷ್ಯಾದ ಮೌಂಟ್ ಸಿನಬಂಗ್ ಪ್ರಾಂತ್ಯದಲ್ಲಿ ಕಳೆದ ಶನಿವಾರ ಹೊಗೆ ಉಗುಳುತ್ತಿದ್ದ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಸಮೀಪಗದ ಗ್ರಾಮಗಳ 16 ಮಂದಿ ಜೀವಕಳೆದುಕೊಂಡಿದ್ದಾರೆ. ಜ್ವಾಲಾಮುಖಿಯ ತೀವ್ರತೆ ಎಷ್ಟಿತ್ತೆಂದರೆ ಲಾವಾರಸ 2 ಕಿ.ಮೀ ದೂರದವರೆಗೂ ಚಿಮ್ಮುತ್ತಿದೆ. ಈಗಾಗಲೇ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ಗ್ರಾಮಸ್ಥರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸುತ್ತಿದ್ದಾರೆ.
ಅಧಿಕಾರಿಗಳ ಪ್ರಕಾರ ಇಲ್ಲಿವರೆವಿಗೂ ಸುಮಾರು 26ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, ಅವರೆಲ್ಲರೂ ಅವಶೇಷಗಳಡಿಯಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜ್ವಾಲಾಮುಖಿ ಸ್ಫೋಟದಿಂದಾಗಿ ಸುಮಾರು 5 ಕಿ.ಮೀ ವ್ಯಾಪ್ತಿಯಲ್ಲಿ ದಟ್ಟಹೊಗೆ ಸುತ್ತುವರೆದಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯುಂಟಾಗುತ್ತಿದೆ. ಸಮೀಪದಲ್ಲಿಯೇ ಇರುವ ಶಾಲಾ ಆವರಕ್ಕೂ ಲಾವಾರಸ ಹರಿದಿದ್ದು ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಒರ್ವ ಪತ್ರಕರ್ತ ಸಿಲುಕಿರುವ ಶಂಕೆ ವ್ಯಕ್ತವಾಗುತ್ತಿದೆ.
ರಕ್ಷಣಾಕಾರ್ಯ ಭರದಿಂದ ಸಾಗಿದ್ದು, ಕಾರ್ಯಾಚರಣೆಗೆ ಸೈನಿಕರನ್ನು ಬಳಸಿಕೊಳ್ಳುವಂತೆ ಇಂಡೋನೇಷ್ಯಾ ಸರ್ಕಾರ ಆದೇಶಿಸಿದೆ.