ಲೋಕಪಾಲ್ ಗಾಗಿ ರಾಜಿನಾಮೆಗೂ ಸಿದ್ಧ: ಕೇಜ್ರಿವಾಲ್
ದೆಹಲಿಯಲ್ಲಿ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಲು ತಾವು ತಮ್ಮ ಮುಖ್ಯಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲೂ ತಾವು ಹಿಂಜರಿಯುವುದಿಲ್ಲ..
ನವದೆಹಲಿ: ದೆಹಲಿಯಲ್ಲಿ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಲು ತಾವು ಯಾವುದೇ ಮಟ್ಟಕ್ಕೆ ಹೋಗಲೂ ಸಿದ್ಧವಿದ್ದು, ತಮ್ಮ ಮುಖ್ಯಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಲೂ ತಾವು ಹಿಂಜರಿಯುವುದಿಲ್ಲ ಎಂದು ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಕೇಜ್ರಿವಾಲ್ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಒಗ್ಗೂಡಿ ಜನಲೋಕಪಾಲ್ ಅನ್ನು ಜಾರಿಗೊಳಿಸದಿರಲು ಷಡ್ಯಂತ್ರ ರಚಿಸುತ್ತಿವೆ. ದೆಹಲಿ ಸದನದ ವಿಶೇಷ ಅಧಿವೇಶನದಲ್ಲಿ ಜನಲೋಕಪಾಲ್ ಜಾರಿಯಾಗಬೇಕು. ಇಲ್ಲವಾದರೆ ಅದಕ್ಕಾಗಿ ನಾವು ಯಾವ ಮಟ್ಟಕ್ಕೂ ಹೋಗಲು ಸಿದ್ಧ. ಜನಲೋಕಪಾಲ್ ಜಾರಿಗೆ ಯಾರಾದರೂ ತೊಡಕುಂಟು ಮಾಡಿದರೆ ತಾವು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.
ಇದೇ ಫೆಬ್ರವರಿ 13ರಿಂದ 16ರವರೆಗೆ ನಡೆಯುವ ಈ ವಿಶೇಷ ಕಲಾಪದಲ್ಲಿ ಆಪ್ ಪಕ್ಷ ಜನಲೋಕಪಾಲ್ ಮತ್ತು ಸ್ವರಾಜ್ ಮಸೂದೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಆದರೆ ಆಪ್ ನಿರ್ಧಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ವಿರೋಧ ವ್ಯಕ್ತಪಡಿಸಿದ್ದು, ಮಸೂದೆ ಜಾರಿಗಾಗಿ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳ ಪೈಕಿ ಒಂದು ಪಕ್ಷದ ಬೆಂಬಲ ಅತ್ಯವಶ್ಯಕ. ಅಲ್ಪ ಬಹುಮತದಿಂದ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿರುವ ಆಪ್ ಪಕ್ಷ ಇದೀಗ ಮಸೂದೆ ಜಾರಿಗಾಗಿ ಹೆಚ್ಚು ಶಾಸಕರ ಬೆಂಬಲ ಪಡೆಯಬೇಕಿದೆ.
ನಾಲ್ಕು ದಿನಗಳ ಕಾಲ ನಡೆಯುವ ದೆಹಲಿ ವಿಧಾನಸಭೆಯ ಸದನದ ಮೊದಲ ದಿನವೇ ಜನಲೋಕಪಾಲ್ ಅನ್ನು ಜಾರಿಗೊಳಿಸಬೇಕೆಂಬುದು ಅರವಿಂದ್ ಕೇಜ್ರಿವಾಲ್ ಅವರ ಮಹತ್ವಾಕಾಂಕ್ಷೆಯಾಗಿದ್ದು, ಇದಕ್ಕೆ ಸಂಸತ್ತಿನ ನಿಯಮಾವಳಿಗಳು ತೊಡಕಾಗಿವೆ. ದೆಹಲಿ ರಾಜ್ಯವು ಕೇಂದ್ರಾಡಳಿತ ಪ್ರದೇಶವಾಗಿದ್ದು, ಅಲ್ಲಿ ಯಾವುದೇ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು ಎನ್ನುವುದು ಯುಪಿಎ ಸರ್ಕಾರದ ನಿಲುವಾಗಿದೆ. ಆದರೆ ಈ ಬಗ್ಗೆ ಕಾನೂನು ಪಂಡಿತರು ಹೇಳುವುದೇ ಬೇರೆಯಾಗಿದ್ದು, ಕೆಲವು ವಿಶೇಷ ಸಂದರ್ಭಗಳಲ್ಲಿ ಮಸೂದೆಯನ್ನು ಜಾರಿಗೊಳಿಸಲು ಕೇಂದ್ರಸರ್ಕಾರದ ಅನುಮತಿ ಬೇಕಿರುವುದಿಲ್ಲ ಎಂದು ಆಪ್ ಪಕ್ಷವಾದಿಸುತ್ತಿದೆ.
ಹೀಗಾಗಿಯೇ ಜನಲೋಕಪಾಲ್ ಜಾರಿ ಸಂಬಂಧ ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರದ ನಡುವೆ ವಾಗ್ವಾದ ಏರ್ಪಟ್ಟಿದ್ದು, ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಜನಲೋಕಪಾಲ್ ಜಾರಿಯಾಗದಿದ್ದರೆ ತಾವು ರಾಜಿನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ.