ಕೊಂಚದರಲ್ಲೇ ಪ್ರಾಣಾಪಾಯದಿಂದ ಪಾರು: ವೈದ್ಯರ ಸ್ಪಷ್ಟನೆ
ಮಾಜಿ ಸಚಿವ ರಾಮದಾಸ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಪೊಲೋ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮೈಸೂರು: ಆತ್ಮಹತ್ಯೆಗೆ ಪ್ರಯತ್ನ ಪಟ್ಟು ತೀವ್ರ ಅಸ್ವಸ್ಥಗೊಂಡಿರುವ ಮಾಜಿ ಸಚಿವ ರಾಮದಾಸ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ರಾಮದಾಸ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಪೊಲೋ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಕೊಂಚ ತಡವಾಗಿ ರಾಮದಾಸ್ ಅವರನ್ನು ಕರೆತಂದಿದ್ದರೆ ಅವರಿಗೆ ಖಂಡಿತವಾಗಿಯೂ ಪ್ರಾಣಾಪಾಯವೇರ್ಪಡುತ್ತಿತ್ತು. ಬೇಗನೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿರುವುದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪೊಲೋ ಆಸ್ಪತ್ರೆಯತ್ತ ಧಾವಿಸಿದ ನೂರಾರು ಬಿಜೆಪಿ ಕಾರ್ಯಕರ್ತರು
ಇತ್ತ ರಾಮದಾಸ್ ಅವರ ಆತ್ಮಹತ್ಯಾ ಪ್ರಯತ್ನ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಅತ್ತ ಮೈಸೂರಿನ ಅಪೊಲೋ ಆಸ್ಪತ್ರೆಯತ್ತ ನೂರಾರು ಬಿಜೆಪಿ ಕಾರ್ಯಕರ್ತರು ಧಾವಿಸಿದ್ದಾರೆ. ಅಲ್ಲದೆ ರಾಮದಾಸ್ ಅವರ ಆತ್ಮಹತ್ಯಾ ಪ್ರಯತ್ನಕ್ಕೆ ಸುದ್ದಿ ಮಾಧ್ಯಮಗಳೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಮಾಧ್ಯಮಗಳು ಪ್ರೇಮಕುಮಾರಿ ಅವರ ಹೇಳಿಕೆಯನ್ನು ಅನಗತ್ಯವಾಗಿ ಬಿತ್ತರಿಸುತ್ತಿದ್ದು, ಇದರಿಂದ ಮನನೊಂದ ರಾಮದಾಸ್ ಅವರು ಆತ್ನಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.