ಲೋಕಪಾಲ್ ಗಾಗಿ ಪ್ರಾಣ ತ್ಯಾಗಕ್ಕೂ ಸಿದ್ದ: ಕೇಜ್ರಿವಾಲ್
ಜನಲೋಕಪಾಲ್ ಮಸೂದೆಗಾಗಿ ತಾವು ಸಾವಿರ ಬಾರಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ಧವಿದ್ದು, ಅಗತ್ಯ ಬಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ದ..
ನವದೆಹಲಿ: ಜನಲೋಕಪಾಲ್ ಮಸೂದೆಗಾಗಿ ತಾವು ಸಾವಿರ ಬಾರಿ ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಿದ್ಧವಿದ್ದು, ಅಗತ್ಯ ಬಿದ್ದರೆ ಪ್ರಾಣ ತ್ಯಾಗಕ್ಕೂ ಸಿದ್ದ ಎಂದು 'ಮಾಜಿ ಸಿಎಂ' ಅರವಿಂದ್ ಕೇಜ್ರಿವಾಲ್ ಹೇಳಿದರು.
ರಾಜಿನಾಮೆ ಬಳಿಕೆ ಮಾತನಾಡಿದ 'ಮಾಜಿ ಸಿಎಂ' ಕೇಜ್ರಿವಾಲ್ ಅವರು, 'ಜನಲೋಕಪಾಲ್ ಮಸೂದೆಗಾಗಿ ನಾನು ನನ್ನ ಸ್ಥಾನವನ್ನು ತ್ಯಜಿಸಿದ್ದೇನೆ. ಮಸೂದೆಗಾಗಿ ಕೇವಲ ರಾಜಿನಾಮೆಯಲ್ಲ ನನ್ನ ಪ್ರಾಣ ತ್ಯಾಗಕ್ಕೂ ತಾನು ಸಿದ್ಧ. ಹಳೆಯ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ಸಾಧಿಸಲಾಗದ್ದನ್ನು ನಾವು ಸಾಧಿಸಿ ತೋರಿಸಿದ್ದೇವೆ. ದೆಹಲಿಯಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಿದ್ದೇವೆ. ವಿದ್ಯುತ್ ಮತ್ತು ನೀರಿನ ಬಿಲ್ ಅನ್ನು ಕಡಿಮೆಗೊಳಿಸಿದ್ದೇವೆ ಎಂದು ಹೇಳಿದರು.
ಅಲ್ಲದೆ ಇದೇ ವೇಳೆ ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರನ್ನು ಗುರಿಯಾಗಿಸಿಕೊಂಡ ಕೇಜ್ರಿವಾಲ್ ಅವರು, ಕಳೆದ 10 ವರ್ಷಗಳಿಂದ ಮುಖೇಶ್ ಈ ದೇಶದ ಆಡಳಿತವನ್ನು ನಡೆಸಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಮುಖೇಶ್ ಹಣ ವ್ಯಯಿಸುತ್ತಿದ್ದಾರೆ. ಅಂತೆಯೇ ನರೇಂದ್ರ ಮೋದಿ ಅವರ ಎಲ್ಲ ದೊಡ್ಡ ದೊಡ್ಡ ರ್ಯಾಲಿಗಳಿಗೂ ಕೂಡ ಮುಖೇಶ್ ಹಣ ವ್ಯಯಿಸುತ್ತಿದ್ದಾರೆ ಎಂದು ಕೇಜ್ರಿವಾಲ್ ಅವರು ಆರೋಪಿಸಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಅಸಲಿ ಮುಖವಾಡ ಕಳಚಿ ಬಿದ್ದಿದ್ದು, ಈ ಎರಡೂ ಪಕ್ಷಗಳಿಗೂ ಭ್ರಷ್ಟಚಾರದ ನಿಯಂತ್ರಣ ಬೇಕಿಲ್ಲ. ಹೀಗಾಗಿಯೇ ತಾವು ರಾಜಿನಾಮೆ ನೀಡಿದ್ದು, ಈ ರಾಜಿನಾಮೆ ಭ್ರಷ್ಟಾಚಾರ ವಿರುದ್ಧದ ರಾಜಿನಾಮೆ ಎಂದು ಕೇಜ್ರಿವಾಲ್ ಬಣ್ಣಿಸಿದರು.
ಈ ಮೇಲ್ ಮುಖಾಂತರ ರಾಜಿನಾಮೆ ಪತ್ರವನ್ನು ಉಪರಾಜ್ಯಪಾಲರಿಗೆ ಸಲ್ಲಿಸಿರುವ ಅವರು, ದೆಹಲಿ ವಿಧಾನಸಭೆಯನ್ನು ವಿಸರ್ಜಿಸುವಂತೆ ಮನವಿ ಮಾಡಿದ್ದಾರೆ.
ಕೇಜ್ರಿವಾಲ್ ಅವರ ರಾಜಿನಾಮೆ ಮೂಲಕ ನಲವತ್ತೊಂಬತ್ತು ದಿನಗಳ ದೆಹಲಿ ಸರ್ಕಾರ ಬಹುತೇಕ ಅಂತ್ಯವಾಗಿದೆ. ಆಡಳಿತ ನಡೆಸುತ್ತಿರುವ ಸರ್ಕಾರವೊಂದರ ಮುಖ್ಯಮಂತ್ರಿ ಕೇವಲ ಮಸೂದೆ ಜಾರಿ ವಿಚಾರಕ್ಕಾಗಿ ರಾಜಿನಾಮೆ ಸಲ್ಲಿಸಿರುವುದು ದೇಶದ ರಾಜಕೀಯದಲ್ಲಿ ಇದೇ ಮೊದಲು.