ವೈಯುಕ್ತಿಕವಾಗಿ ನಾನು ರಾಜ್ಯ ವಿಭಜನೆ ವಿರೋಧಿ: ಸಚಿವ ಚಿರಂಜೀವಿ
ತಾನು ರಾಜ್ಯ ವಿಭಜನೆ ವಿರೋಧಿಯಾಗಿದ್ದು, ಆದರೆ ಪಕ್ಷದ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಹೇಳಿದ್ದಾರೆ.
ನವದೆಹಲಿ: ತಾನು ವೈಯುಕ್ತಿಕವಾಗಿ ತೆಲಂಗಾಣ ಪ್ರತ್ಯೇಕ ರಾಜ್ಯ ರಚನೆಯ ವಿರೋಧಿಯಾಗಿದ್ದು, ಆದರೆ ಪಕ್ಷದ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಇಂದು ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರು ಆಂಧ್ರ ಪ್ರದೇಶ ರಾಜ್ಯ ವಿಭಜನೆ ವಿಧೇಯಕವನ್ನು ಮಂಡಿಸಿದರು. ವಿಧೇಯಕದ ಮಂಡನೆ ನಂತರ ನಡೆದ ಚರ್ಚೆ ವೇಳೆ ನಟ ಚಿರಂಜೀವಿ ತಮ್ಮ ಅಭಿಪ್ರಾಯವನ್ನು ಹೊರಹಾಕಿದರು. 'ಮೊದಲನೆಯದಾಗಿ ನಾನು ಆಂಧ್ರ ವಿಭಜನೆಯ ವಿರೋಧಿ. ಆದರೆ ಪಕ್ಷದ ನಿರ್ಧಾರವನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕು. ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ನಿರ್ಧಾರ ಕೇವಲ ಕಾಂಗ್ರೆಸ್ ಸರ್ಕಾರದ್ದಲ್ಲ. ಎಲ್ಲದಕ್ಕೂ ಕಾಂಗ್ರೆಸ್ ಪಕ್ಷವನ್ನು ದೂರುವುದು ಸರಿಯಲ್ಲ'.
'ಹಿಂದಿನಿಂದಲೂ ಈ ಬಗ್ಗೆ ಚರ್ಚೆಗಳು ನಡೆದಿತ್ತು. ಕಾಂಗ್ರೆಸ್ ಸರ್ಕಾರ ದೃಢ ಸಂಕಲ್ಪ ಮಾಡಿ ಪ್ರತ್ಯೇಕ ತೆಲಂಗಾಣ ರಚನೆಗೆ ಮುಂದಾಯಿತು. ಆದರೆ ಲೋಕಸಭೆಯಲ್ಲಿ ವಿಧೇಯಕವನ್ನು ಚರ್ಚಾರಹಿತವಾಗಿ ಅಂಗೀಕಾರ ಮಾಡಿರುವುದು ದುರದೃಷ್ಟಕರ. ಕಳೆದ ಕೆಲ ದಿನಗಳಿಂದ ಆಂಧ್ರ ಪ್ರದೇಶದಲ್ಲಿ ಅಹಿತಕರ ಬೆಳವಣಿಗೆಗಳು ನಡೆಯುತ್ತಿವೆ. ಜನರ ಮನಸ್ಸಿನಲ್ಲಿ ದ್ವೇಷದ ವಿಷ ಬೀಜ ಬಿತ್ತಿ ರಾಜ್ಯ ವಿಭಜನೆ ಮಾಡುವುದು ಬೇಡ. ಹೈದರಾಬಾದ್ ನಗರದೊಂದಿಗೆ ಭಾವನಾತ್ಮಕ ನಂಟಿದ್ದು, ರಾಜ್ಯ ವಿಭಜನೆಯಿಂದ ತೆಲುಗು ಜನತೆಗೆ ಅಪಾರ ನಷ್ಟವಾಗುತ್ತದೆ. ತೆಲಂಗಾಣ ರಾಜ್ಯ ವಿಭಜನೆ ಬಗ್ಗೆ ಟಿಡಿಪಿ ಮತ್ತು ಬಿಜೆಪಿ ಪಕ್ಷಗಳಿಗೆ ಅಸ್ಪಷ್ಟತೆ ಇದೆ. ಹೀಗಾಗಿಯೇ ತೆಲಂಗಾಣ ರಾಜ್ಯ ರಚನೆ ಮಾಡುವಂತೆ ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತಿದ್ದಾರೆ' ಎಂದು ಚಿರಂಜೀವಿ ಹೇಳಿದರು.
ಚಿರಂಜೀವಿ ಹೇಳಿಕೆಗೆ ಜೇಟ್ಲಿ ಆಕ್ಷೇಪ
ತೆಲಂಗಾಣ ರಾಜ್ಯ ವಿಭಜನೆ ಬಗ್ಗೆ ಟಿಡಿಪಿ ಮತ್ತು ಬಿಜೆಪಿ ಪಕ್ಷಗಳಿಗೆ ಅಸ್ಪಷ್ಟತೆ ಇದೆ ಎಂಬ ಪ್ರವಾಸೋಧ್ಯಮ ಸಚಿವ ಚಿರಂಜೀವಿ ಅವರ ಹೇಳಿಕೆಗೆ ಪ್ರತಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
'ಅಸ್ಪಷ್ಟತೆ ಇರುವುದು ಬಿಜೆಪಿಗಲ್ಲ ನಿಮಗೆ. ಹೀಗಾಗಿಯೇ ಆಂಧ್ರ ವಿಭಜನೆಯ ವಿರೋಧಿ ಎಂದು ಹೇಳಿಕೊಳ್ಳುತ್ತೀರಿ ಮತ್ತೊಂದೆಡೆ ಪಕ್ಷದ ತೀರ್ಮಾನವನ್ನು ಒಪ್ಪಿಕೊಳ್ಳಬೇಕು ಎಂದು ವಾದಿಸುತ್ತೀರಿ. ಮೊದಲು ನಿಮ್ಮ ನಿಲುವು ಸ್ಪಷ್ಟಪಡಿಸಿ' ಎಂದು ಜೇಟ್ಲಿ ಹೇಳಿದರು.