ಕೇಜ್ರಿವಾಲ್ ಪವರ್ ಸಬ್ಸಿಡಿಗೆ 'ಹೈ' ಬ್ರೇಕ್
ಕಳೆದ ಫೆಬ್ರವರಿಯಲ್ಲಿ ದೆಹಲಿ ಸರ್ಕಾರ ಘೋಷಿಸಿದ್ದ ವಿದ್ಯುತ್ ಬಿಲ್ ಮೇಲಿನ ರಿಯಾಯಿತಿಯನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿದೆ.
ನವದೆಹಲಿ: ಕಳೆದ ಫೆಬ್ರವರಿಯಲ್ಲಿ ದೆಹಲಿ ಸರ್ಕಾರ ಘೋಷಿಸಿದ್ದ ವಿದ್ಯುತ್ ಬಿಲ್ ಮೇಲಿನ ರಿಯಾಯಿತಿಯನ್ನು ದೆಹಲಿ ಹೈಕೋರ್ಟ್ ತಡೆಹಿಡಿದಿದೆ.
ದೆಹಲಿ ಹೈಕೋರ್ಟ್ ನ್ಯಾ.ಬಿ.ಡಿ.ಅಹ್ಮದ್ ಮತ್ತು ನ್ಯಾ.ಸಿದ್ಧಾರ್ಥ್ ಮೃದುಲ್ ಅವರ ನೇತೃತ್ವದ ದ್ವಿಸದಸ್ಯ ಪೀಠವು ದೆಹಲಿ ಸರ್ಕಾರದ ನಿರ್ಧಾರವನ್ನು ತಡೆಹಿಡಿದಿದೆ. ಅಲ್ಲದೆ ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರಕ್ಕೆ ತಮ್ಮ ನಿಲುವು ಸ್ಪಷ್ಟಪಡಿಸಲು ಸಲ್ಲಿಸುವಂತೆ ಮತ್ತು ಮುಂದಿನ ವಿಚಾರಣೆಯೊಳಗೆ ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿದೆ.
ಕಳೆದ ಫೆಬ್ರವರಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ 2012ರ ಅಕ್ಟೋಬರ್ ತಿಂಗಳಿನಿಂದ 2013ರ ಡಿಸೆಂಬರ್ ತಿಂಗಳವರೆಗಿನ ವಿದ್ಯುತ್ ಬಿಲ್ಲನ್ನು ಬಾಕಿ ಉಳಿಸಿಕೊಂಡಿರುವ ಎಲ್ಲ ಬಳಕೆದಾರರ ಬಿಲ್ನಲ್ಲಿ ಶೇ.50 ರಷ್ಟು ರಿಯಾಯಿತಿ ಘೋಷಿಸಿತ್ತು. ಸರ್ಕಾರದ ಈ ನಿರ್ಧಾರವನ್ನು ಪ್ರಶ್ನಿಸಿ ವಕೀಲ ವಿವೇಕ್ ಶರ್ಮಾ ಎಂಬುವವರು ದೆಹಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ದೆಹಲಿ ಸರ್ಕಾರದ ನಿಲುವನ್ನು ಟೀಕಿಸಿತ್ತು.
ಅಲ್ಲದೆ ದೆಹಲಿ ಸರ್ಕಾರದ ನಿರ್ಧಾರದಲ್ಲಿ ಸ್ಪಷ್ಟತೆ ಇಲ್ಲ. ಹೀಗಾಗಿ ತನ್ನ ನಿರ್ಧಾರದ ಕುರಿತು 10 ದಿನಗಳೊಳಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಅಲ್ಲದೆ ವಿಚಾರಣೆಯನ್ನು ಮಾರ್ಚ್ 18ಕ್ಕೆ ಮುಂದೂಡಿದೆ.