ಗಡಿ ವಿಸ್ತರಣೆಯನ್ನು ಕೂಡಲೇ ನಿಲ್ಲಿಸಿ: ಚೀನಾಗೆ ಮೋದಿ ಎಚ್ಚರಿಕೆ
ಚೀನಾ ದೇಶ ತನ್ನ ಗಡಿ ವಿಸ್ತರಣಾ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಪಸಿಘಾಟ್(ಅರುಣಾಚಲ ಪ್ರದೇಶ): ಚೀನಾ ದೇಶ ತನ್ನ ಗಡಿ ವಿಸ್ತರಣಾ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ನಡೆದ ಪ್ರಚಾರ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ನರೇಂದ್ರ ಮೋದಿ ಅವರು, 'ಚೀನಾ ತನ್ನ ಗಡಿಯನ್ನು ವಿಸ್ತರಿಸಬೇಕು ಎಂಬ ಯೋಜನೆಯನ್ನು ಹಾಕಿಕೊಂಡಿದ್ದರೆ ಅದನ್ನು ಕೂಡಲೇ ನಿಲ್ಲಿಸಬೇಕು. ಉಭಯ ದೇಶಗಳ ನಡುವಿನ ಗಡಿ ಒಪ್ಪಂದವನ್ನು ಚೀನಾ ಗೌರವಿಸುವ ಮೂಲಕ ಉಭಯ ದೇಶಗಳ ಸಮೃದ್ಧಿ ಮತ್ತು ಅಭಿವೃದ್ಧಿಗೆ ಸಹಕರಿಸಬೇಕು' ಎಂದು ಮೋದಿ ಹೇಳಿದ್ದಾರೆ.
'ಅರುಣಾಚಲ ಪ್ರದೇಶ ಸಮಗ್ರ ಭಾರತದ ಭಾಗವಾಗಿದ್ದು, ಯಾವುದೇ ಬಾಹ್ಯಶಕ್ತಿಗಳು ಅದನ್ನು ನಮ್ಮಿಂದ ಕಿತ್ತುಕೊಳ್ಳಲು ಸಾಧ್ಯವಿಲ್ಲ. ಅರುಣಾಚಲ ಪ್ರದೇಶದ ಜನರು ಯಾವುದೇ ಒತ್ತಡ ಅಥವಾ ಚೀನಾದ ಭಯದ ನೆರಳಲ್ಲಿ ಬದುಕುತ್ತಿಲ್ಲ. ನಾನು ಈ ಮಣ್ಣಿನ ಪ್ರಮಾಣವಾಗಿ ಹೇಳುತ್ತೇನೆ ಭಾರತದಿಂದ ಅರುಣಾಚಲಪ್ರದೇಶ ಕಣ್ಮರೆಯಾಗಲು ಅವಕಾಶ ನೀಡುವುದಿಲ್ಲ. ಚೀನಾ ತನ್ನ ಗಡಿ ವಿಸ್ತರಣಾ ಯೋಜನೆಯನ್ನು ಕೂಡಲೇ ನಿಲ್ಲಿಸಬೇಕು. ಚೀನಾದ ಇಂತಹ ಕ್ರಮವನ್ನು ಅಂತಾರಾಷ್ಟ್ರೀಯ ಸಮುದಾಯ ಒಪ್ಪುವುದಿಲ್ಲ'.
'ವಿಶ್ವದ ದೃಷ್ಟಿಕೋನ ಬದಲಾಗಿದ್ದು, ಎಲ್ಲ ದೇಶಗಳು ಅಭಿವೃದ್ಧಿಯತ್ತ ಹೆಜ್ಜೆ ಹಾಕುತ್ತಿವೆ. ಆದರೆ ಚೀನಾ ಮಾತ್ರ ಗಡಿ ವಿಸ್ತರಣೆಯಲ್ಲಿ ತೊಡಗಿದೆ ನಾವು ಇದನ್ನು ಸಹಿಸಿಕೊಳ್ಳುವುದಿಲ್ಲ. ಪ್ರತಿಯೊಂದು ದೇಶವೂ ತನ್ನ ಗಡಿ ಒಪ್ಪಂದವನ್ನು ಗೌರವಿಸಬೇಕು'.
'ಅರುಣಾಚಲ ಪ್ರದೇಶದ ಜನರು ನಿಜವಾದ ದೇಶ ಪ್ರೇಮಿಗಳು, ಸೇನೆಯಲ್ಲಿ ಅವರ ಕಾರ್ಯ ಶ್ಲಾಘನೀಯ. ಚಳಿ ಗಾಳಿ ಬಿಸಿಲನ್ನು ಲೆಕ್ಕಿಸದೇ ದೇಶದ ಭದ್ರತೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿದ್ದಾರೆ. 1962ರಲ್ಲಿ ಚೀನಾ ದೇಶ ನಮ್ಮ ಗಡಿಯನ್ನು ಅತಿಕ್ರಮಿಸಿದಾಗ ಇದೇ ಅರುಣಾಚಲ ಪ್ರದೇಶದ ಸೈನಿಕರು ಅವರಿಗೆ ದಿಟ್ಟ ಉತ್ತರ ನೀಡಿದ್ದರು. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿಯೂ ಅವರ ಪಾತ್ರ ಬಹುಮುಖ್ಯವಾಗಿತ್ತು' ಎಂದು ಮೋದಿ ಹೇಳಿದರು.
ನಿಡೋ ತಾನಿಯಾ ಸಾವಿನ ವಿಚಾರವಾಗಿ ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಮೋದಿ
ಇತ್ತೀಚೆಗೆ ನವದೆಹಲಿಯ ಲಜಪತ್ ನಗರದಲ್ಲಿ ಅರುಣಾಚಲ ಪ್ರದೇಶ ಶಾಸಕನ ಪುತ್ರ ನಿಡೋ ತಾನಿಯಾ ಸಾವಿನ ಕುರಿತು ಮಾತನಾಡಿದ ಮೋದಿ, 'ದೇಶದ ಪ್ರತಿಯೊಬ್ಬ ನಾಗರೀಕನ ರಕ್ಷಣೆ ಕೇಂದ್ರ ಸರ್ಕಾರದ ಹೊಣೆಯಾಗಿದೆ. ಆದರೆ ಕೇಂದ್ರ ಯುಪಿಎ ಸರ್ಕಾರ ಅರುಣಾಚಲ ಪ್ರದೇಶದ ಜನತೆಯನ್ನು ಕಡೆಗಣಿಸಿದೆ. ಯಾವುದೇ ರಾಜ್ಯದ ನಾಗರೀಕನನ್ನು ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ'ವೆಂದು ಮೋದಿ ಹೇಳಿದರು.
ಒಟ್ಟಾರೆ ಪ್ರತಿಬಾರಿ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಮಾತನಾಡುತ್ತಿದ್ದ ನರೇಂದ್ರ ಮೋದಿ ಅವರು ಇಂದು ಅರುಣಾಚಲ ಪ್ರದೇಶದಲ್ಲಿ ಚೀನಾ ದೇಶವನ್ನು ಕೇಂದ್ರವಾಗಿಸಿಕೊಂಡು ಟೀಕಾಪ್ರಹಾರ ನಡೆಸಿದರು. ಪ್ರತಿಬಾರಿಯಂತೆ ಸ್ಥಳೀಯ ಹಿನ್ನಲೆ ಮತ್ತು ಸಮಸ್ಯೆಗಳನ್ನು ಅರಿತು ಭಾಷಣ ಮಾಡುವ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶದಲ್ಲಿಯೂ ಅದನ್ನೇ ಮಾಡಿದ್ದಾರೆ.